ಬಿಸಿಸಿಐ, ಐಒಎಗೆ ಕೋವಿಡ್-19ರ ಕುರಿತು ಸೂಚನೆ ನೀಡಿದ ಕೇಂದ್ರ ಸರಕಾರ

Update: 2020-03-19 17:30 GMT

ಹೊಸದಿಲ್ಲಿ, ಮಾ.19: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಹೊಸ ಸೂಚನೆ ನೀಡಿರುವ ಕೇಂದ್ರ ಸರಕಾರವು ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಎ) ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಗೆ(ಎನ್‌ಎಸ್‌ಎಫ್)ಭಾರತೀಯ ಅಥ್ಲೀಟ್‌ಗಳ ರಕ್ಷಣೆಗಾಗಿ ತನ್ನ ಆದೇಶವನ್ನು ಪಾಲಿಸುವಂತೆ ಸೂಚಿಸಿದೆ.

 ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್, ಎಲ್ಲ ಎನ್‌ಎಸ್‌ಎಫ್, ಬಿಎಸ್‌ಎಫ್ ಹಾಗೂ ಬಿಸಿಸಿಐನ ಎಲ್ಲ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಸರಕಾರದ ಉಪ ಕಾರ್ಯದರ್ಶಿ ಎಸ್‌ಪಿಎಸ್ ಥೋಮರ್, ಎಪ್ರಿಲ್ 15,2020ರ ತನಕ ಆಯ್ಕೆ ಟ್ರಯಲ್ಸ್ ಸೇರಿದಂತೆ ಯಾವುದೇ ಕ್ರೀಡಾ ಸ್ಪರ್ಧೆಗಳನ್ನು ನಡೆಸುವಂತಿಲ್ಲ ಎಂದು ಹೇಳಿದೆ.

ಕ್ರೀಡಾ ಸಚಿವಾಲಯವು ಈಗಾಗಲೇ ಎಲ್ಲ ರಾಷ್ಟ್ರೀಯ ಶಿಬಿರಗಳನ್ನು ರದ್ದುಪಡಿಸಿದೆ. ಟೋಕಿಯೊ ಒಲಿಂಪಿಕ್ಸ್‌ಗಾಗಿ ತರಬೇತಿ ನಡೆಯುತ್ತಿರುವ ಕ್ಯಾಂಪಸ್‌ನ ಹೊರಗಿನ ಕ್ರೀಡಾಪಟುಗಳಿಗೆ ಯಾವುದೇ ಮಾನ್ಯತೆ ನೀಡಬಾರದು ಎಂದು ಸಲಹೆ ನೀಡಿದೆ.

ಪ್ರಸ್ತುತ ತರಬೇತಿ ಶಿಬಿರದಲ್ಲಿಲ್ಲದ, ಶಿಬಿರಗಳಲ್ಲಿ ಉಳಿದುಕೊಳ್ಳದ ಯಾವುದೇ ತರಬೇತುದಾರ, ತಾಂತ್ರಿಕ/ಸಹಾಯಕ ಸಿಬ್ಬಂದಿ, ಅಥ್ಲೀಟ್ ಇನ್ನಿತರರು ಪ್ರತ್ಯೇಕತೆಯ ಶಿಷ್ಟಾಚಾರವನ್ನು ಅನುಸರಿಸದೆ ತರಬೇತಿಗೊಂಡ ಕ್ರೀಡಾಪಟುಗಳೊಂದಿಗೆ ಸಂವಹನ ನಡೆಸಲು ಹಾಗೂ ಬೆರೆಯಲು ಅನುಮತಿ ನೀಡುವುದಿಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಹೊಸದಿಲ್ಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ತನ್ನ ಶೂಟರ್‌ಗಳಿಗೆ ಒಲಿಂಪಿಕ್ಸ್ ಟ್ರಯಲ್ಸ್ ನಡೆಸುವುದನ್ನು ಸ್ಥಗಿತಗೊಳಿಸಲು ರಾಷ್ಟ್ರೀಯ ರೈಫಲ್ ಅಸೋಸಿಯೇಶನ್(ಎನ್‌ಆರ್‌ಎಐ)ನಿರ್ಧರಿಸಿದ ಬಳಿಕ ಈ ಸೂಚನೆಯನ್ನು ಕೇಂದ್ರ ಸರಕಾರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News