ಭಾರತದ ಫುಟ್ಬಾಲ್ ದಂತಕತೆ ಪಿ.ಕೆ. ಬ್ಯಾನರ್ಜಿ ನಿಧನ

Update: 2020-03-20 11:53 GMT

ಕೋಲ್ಕತಾ, ಮಾ.20: ಭಾರತದ ಫುಟ್ಬಾಲ್ ದಂತಕತೆ ಪಿ.ಕೆ.ಬ್ಯಾನರ್ಜಿ ಶುಕ್ರವಾರ ನಿಧನರಾಗಿದ್ದು ಅವರಿಗೆ 83 ವರ್ಷ ವಯಸ್ಸಾಗಿತ್ತು. ಬ್ಯಾನರ್ಜಿ ಅವರು ನ್ಯುಮೋನಿಯಾದಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಪಾರ್ಕಿನ್ಸನ್ ಕಾಯಿಲೆ ಹಾಗೂ ಹೃದಯದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಮಾರ್ಚ್ 2ರಿಂದ ಇಲ್ಲಿನ ಆಸ್ಪತ್ರೆಯಲ್ಲಿ ಜೀವರಕ್ಷಕ ಬೆಂಬಲದಲ್ಲಿದ್ದ ಬ್ಯಾನರ್ಜಿ ಶುಕ್ರವಾರ ಮಧ್ಯಾಹ್ನ 12:40ಕ್ಕೆ ಕೊನೆಯುಸಿರೆಳೆದರು.

ಬ್ಯಾನರ್ಜಿ ಅವರು ಇಬ್ಬರು ಪುತ್ರಿಯರು, ಕಿರಿಯ ಸಹೋದರ, ಹಾಲಿ ತೃಣಮೂಲ ಕಾಂಗ್ರೆಸ್ ಸಂಸದ ಪ್ರಸೂನ್ ಬ್ಯಾನರ್ಜಿಯನ್ನು ಅಗಲಿದ್ದಾರೆ.

ಬ್ಯಾನರ್ಜಿ 1936ರ ಜೂನ್ 6ರಂದು ಪಶ್ಚಿಮಬಂಗಾಳದ ಜಲ್ಪೈಗುರಿ ಹೊರವಲಯ ಮೊಯ್ನಿಗುರಿಯಲ್ಲಿ ಜನಿಸಿದ್ದರು. 1962ರ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಬ್ಯಾನರ್ಜಿ ಭಾರತದ ಪರ ಆಡಿದ 84 ಪಂದ್ಯಗಳಲ್ಲಿ 65 ಅಂತರ್‌ರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದರು. ಬ್ಯಾನರ್ಜಿ ಅವರ ಕೊಡುಗೆಯನ್ನು ಗುರುತಿಸಿದ ಫಿಫಾ 20ನೇ ಶತಮಾನದ ಭಾರತದ ಶ್ರೇಷ್ಠ ಆಟಗಾರ ಎಂದು ಹೇಳಿತ್ತು.

ತನ್ನ 16ನೇ ವಯಸ್ಸಿನಲ್ಲಿ 1952ರಲ್ಲಿ ಸಂತೋಷ್ ಟ್ರೋಫಿಯಲ್ಲಿ ಬಿಹಾರದ ಪರ ಚೊಚ್ಚಲ ಪಂದ್ಯ ಆಡಿದ್ದ ಬ್ಯಾನರ್ಜಿ 51 ವರ್ಷಗಳ ಬಳಿಕ ಮುಹಮ್ಮದ್ ಸ್ಪೋರ್ಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News