ಲಂಡನ್: ತಕ್ಷಣ ಭಾರತಕ್ಕೆ ಕಳುಹಿಸಿಕೊಡುವಂತೆ ವಿದ್ಯಾರ್ಥಿಗಳ ಒತ್ತಾಯ
ಲಂಡನ್, ಮಾ. 22: ನೋವೆಲ್-ಕೊರೋನವೈರಸ್ ಸಾಂಕ್ರಾಮಿಕ ಕಾಯಿಲೆಯ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧಗಳನ್ನು ಹೇರಿರುವ ಹೊರತಾಗಿಯೂ, ತಮ್ಮನ್ನು ಭಾರತಕ್ಕೆ ವಿಮಾನದಲ್ಲಿ ಕಳುಹಿಸಿಕೊಡಬೇಕೆಂದು ಬ್ರಿಟನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಗುಂಪೊಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್ ಆವರಣದಲ್ಲಿ ಶನಿವಾರ ರಾತ್ರಿ ತಂಗಲು ತಮಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಯುರೋಪ್ ಮತ್ತು ಬ್ರಿಟನ್‌ನಿಂದ ಭಾರತಕ್ಕೆ ಬರುವ ವಿಮಾನಗಳನ್ನು ಈ ತಿಂಗಳ ಕೊನೆಯವರೆಗೆ ನಿಷೇಧಿಸಿರುವುದರಿಂದ, ಬ್ರಿಟನ್‌ನಲ್ಲಿರುವ ಭಾರತೀಯರ ನೆರವಿನಿಂದ ಪರ್ಯಾಯ ವಾಸ್ತವ್ಯ ಕಲ್ಪಿಸಲು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಮುಂದೆ ಬಂದರೂ 19 ವಿದ್ಯಾರ್ಥಿಗಳ ಗುಂಪು ಅದನ್ನು ತಿರಸ್ಕರಿಸಿತು. ಈ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ತೆಲಂಗಾಣ ರಾಜ್ಯದವರು.
‘‘ಭಾರತೀಯ ಸಮುದಾಯವು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿತು. ಆರಂಭದಲ್ಲಿ ಅಲ್ಲಿ 59 ವಿದ್ಯಾರ್ಥಿಗಳಿದ್ದರು. ಅವರ ಪೈಕಿ 40 ಮಂದಿಗೆ ಪರ್ಯಾಯ ವಸತಿ ಕಲ್ಪಿಸಲಾಯಿತು. ಆದರೆ, ಉಳಿದ 19 ಮಂದಿ ಹಠ ಹಿಡಿದು ಅಲ್ಲಿಂದ ಹೋಗಲು ನಿರಾಕರಿಸುತ್ತಿದ್ದಾರೆ’’ ಎಂದು ಸಮುದಾಯದ ನಾಯಕರೊಬ್ಬರು ಹೇಳಿದರು. ಅವರು ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಭಾರತೀಯ ಹೈಕಮಿಶನ್ ಜೊತೆಗೆ ಕೆಲಸ ಮಾಡುತ್ತಿದ್ದಾರೆ.
ಅವರ ಪೈಕಿ ಹೆಚ್ಚಿನವರು ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಮರಳಲು ವಿಮಾನ ಟಿಕೆಟ್‌ಗಳನ್ನು ಕಾದಿರಿಸಿದ್ದರು. ಅದು ಬ್ರಿಟನ್‌ನ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಈಸ್ಟರ್ ರಜೆಯಾಗಿರುತ್ತದೆ. ಆದರೆ, ಮಾರ್ಚ್ 18ರಿಂದ 31ರವರೆಗೆ ಭಾರತ ಪ್ರವೇಶಿಸಲು ಯಾವುದೇ ಪ್ರಯಾಣಿಕನಿಗೆ ಅವಕಾಶ ನಿರಾಕರಿಸುವ ಆದೇಶವನ್ನು ಭಾರತ ಬಳಿಕ ಹೊರಡಿಸಿದೆ.