ಕೊರೋನಾವೈರಸ್ ಎದುರಿಸಲು ಫ್ರಾನ್ಸ್‌ನಿಂದ 300 ಬಿಲಿಯ ಯುರೋ ಯೋಜನೆ
Update: 2020-03-22 22:24 IST
ಬ್ರಸೆಲ್ಸ್ (ಬೆಲ್ಜಿಯಮ್), ಮಾ. 22: ಕೊರೋನವೈರಸ್ ನೀಡಿರುವ ಆರ್ಥಿಕ ಹೊಡೆತದ ಪರಿಣಾಮಗಳನ್ನು ಎದುರಿಸಲು 300 ಬಿಲಿಯ ಯುರೋ (ಸುಮಾರು 24.5 ಲಕ್ಷ ಕೋಟಿ ರೂಪಾಯಿ) ಸರಕಾರಿ ನೆರವು ನೀಡುವ ಫ್ರಾನ್ಸ್‌ನ ಪ್ರಸ್ತಾವಕ್ಕೆ ಯುರೋಪಿಯನ್ ಕಮಿಶನ್ ಶನಿವಾರ ಅಂಗೀಕಾರ ನೀಡಿದೆ.
ಕೊರೋನವೈರಸ್ ಸಾಂಕ್ರಾಮಿಕ ಮಾಡಿರುವ ಹಾನಿಯನ್ನು ನಿಭಾಯಿಸಲು ಫ್ರಾನ್ಸ್‌ನ ಆರ್ಥಿಕತೆಗೆ ನೆರವು ನೀಡುವ ಉದ್ದೇಶದ ಮೂರು ಕ್ರಮಗಳಿಗೆ ಐರೋಪ್ಯ ಒಕ್ಕೂಟದ ಘಟಕ ಸಂಸ್ಥೆ ಅಂಗೀಕಾರ ನೀಡಿದೆ ಎಂದು ಐರೋಪ್ಯ ಒಕ್ಕೂಟ ಆಯೋಗದಲ್ಲಿ ಸ್ಪರ್ಧೆ ನೀತಿಯ ಉಸ್ತುವಾರಿ ಹೊತ್ತಿರುವ ಕಾರ್ಯಕಾರಿ ಉಪಾಧ್ಯಕ್ಷ ಮಾರ್ಗರೆಟ್ ವೆಸ್ಟೇಜರ್ ಹೇಳಿದರು.
ಕೊರೋನವೈರಸ್ ಸಾಂಕ್ರಾಮಿಕ ಒಡ್ಡಿರುವ ಸವಾಲನ್ನು ಎದುರಿಸುವುದಕ್ಕಾಗಿ ಹಣ ಪೂರೈಸಲು ಸರಕಾರಗಳಿಗೆ ಸಾಧ್ಯವಾಗುವಂತೆ ಸಾರ್ವಜನಿಕ ಖರ್ಚಿಗೆ ಸಂಬಂಧಿಸಿದ ಕಠಿಣ ನೀತಿಗಳನ್ನು ಐರೋಪ್ಯ ಒಕ್ಕೂಟವು ಅಮಾನತಿನಲ್ಲಿಡಲಿದೆ ಎಂದು ಐರೋಪ್ಯ ಆಯೋಗ ಹೇಳಿದೆ.