ಸ್ಪೇನ್: ಯಾರನ್ನು ಸಾಯಲು ಬಿಡುವುದು ಎಂಬ ಸಂಕಟದಲ್ಲಿ ವೈದ್ಯರು !

Update: 2020-03-27 16:29 GMT

ಮ್ಯಾಡ್ರಿಡ್ (ಸ್ಪೇನ್), ಮಾ. 27: ಮ್ಯಾಡ್ರಿಡ್‌ನ ದೊಡ್ಡ ಆಸ್ಪತ್ರೆಗಳ ಪೈಕಿ ಒಂದರ ತುರ್ತು ನಿಗಾ ಘಟಕದಲ್ಲಿ ಓರ್ವ ರೋಗಿಯ ಮರಣ ಪ್ರಮಾಣಪತ್ರಕ್ಕೆ ಸಹಿ ಹಾಕಿದ ವೈದ್ಯರೊಬ್ಬರು, ತಕ್ಷಣ ಪಕ್ಕದಲ್ಲೇ ಉಸಿರುಗಟ್ಟುತ್ತಿದ್ದ ಇನ್ನೊಬ್ಬ ರೋಗಿಗೆ ಸಹಾಯ ಮಾಡುವುದಕ್ಕಾಗಿ ಅತ್ತ ತಿರುಗುತ್ತಾರೆ. ಅಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮುನ್ನವೇ ಕಾಯುವ ಕೋಣೆಗಳಲ್ಲಿ ಜನರು ಸಾಯುತ್ತಿದ್ದಾರೆ. ಕೊರೋನವೈರಸ್ ಸಾಂಕ್ರಾಮಿಕವು ಆಸ್ಪತ್ರೆಯ ಸಿಬ್ಬಂದಿಯನ್ನು ಹೈರಾಣಾಗಿಸಿದೆ.

ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಕೆಲವು ಅಂತ್ಯಸಂಸ್ಕಾರಗಳನ್ನು ನಿಲ್ಲಿಸಲಾಗಿದೆ ಹಾಗೂ ಶವಾಗಾರಗಳಲ್ಲಿ ಶವಗಳನ್ನು ಇಡಲು ಸ್ಥಳವೇ ಇಲ್ಲದಂತಾಗಿದೆ. ಶವಗಳನ್ನು ಈಗ ಪ್ರಧಾನ ಶೈತ್ಯಾಗಾರದಲ್ಲಿ ಸಂಗ್ರಹಿಸಿಡಲಾಗುತ್ತಿದೆ.

ತುರ್ತು ನಿಗಾ ಘಟಕಗಳು ಕೊರೋನವೈರಸ್ ರೋಗಿಗಳಿಂದ ತುಂಬಿ ತುಳುಕುತ್ತಿವೆ ಹಾಗೂ ಹೊಸ ನಿಯಮಗಳ ಪ್ರಕಾರ, ವೃದ್ಧ ರೋಗಿಗಳಿಗಿಂತ ಬದುಕುವ ಸಾಧ್ಯತೆಯುಳ್ಳ ಯುವ ರೋಗಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

‘‘ಬೇರೆ ಯಾವುದೇ ದಿನದಲ್ಲಾಗಿದ್ದರೆ, ಆ ಅಜ್ಜ ಬದುಕುಳಿಯುವ ಸಾಧ್ಯತೆ ಚೆನ್ನಾಗಿಯೇ ಇತ್ತು’’ ಎಂದು ವೈದ್ಯ ಡೇನಿಯಲ್ ಬರ್ನಬಾ ಟೆಲಿಫೋನ್ ಮೂಲಕ ‘ಬ್ಲೂಮ್‌ಬರ್ಗ್’ ಮಾಧ್ಯಮಕ್ಕೆ ಹೇಳಿದರು. ‘‘ಆದರೆ, ಇಲ್ಲಿ ಅಂಥವರು ತುಂಬಾ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರೂ ಏಕಕಾಲದಲ್ಲಿ ಸಾಯುತ್ತಿದ್ದಾರೆ’’ ಎಂದರು.

► 655 ಸಾವು

ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 655 ಮಂದಿ ಮೃತಪಟ್ಟಿದ್ದು, ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ 4,089ಕ್ಕೆ ಏರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 56,188ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News