ಕೊರೋನವೈರಸ್‌: ಸಾಮಾಜಿಕ ಜಾಲತಾಣದ ಸುಳ್ಳುಸುದ್ದಿ ನಂಬಿ ಪ್ರಾಣ ಕಳೆದುಕೊಂಡ 300 ಜನರು

Update: 2020-03-27 16:31 GMT

ಟೆಹರಾನ್, ಮಾ. 27: ಕೈಗಾರಿಕಾ ಮದ್ಯಸಾರ ಮಿಥೆನಾಲ್ ಕೊರೋನವೈರಸ್‌ನಿಂದ ರಕ್ಷಣೆ ನೀಡುತ್ತದೆ ಎಂಬ ತಪ್ಪುಗ್ರಹಿಕೆಯಿಂದ ಅದನ್ನು ಸೇವಿಸಿದ 300ಕ್ಕೂ ಅಧಿಕ ಇರಾನಿಯನ್ನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು 1,000ಕ್ಕೂ ಅಧಿಕ ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಎಷ್ಟೋ ಮಕ್ಕಳು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಇರಾನಿನಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ.

ಇರಾನಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನವೈರಸ್‌ಗೆ ನಕಲಿ ಪರಿಹಾರಗಳು ವ್ಯಾಪಕವಾಗಿ ಹರಿದಾಡುತ್ತಿರುವ ಸಮಯದಲ್ಲಿಯೇ ಈ ಬೆಳವಣಿಗೆ ನಡೆದಿದೆ. ಕೊರೋನವೈರಸ್ ಇಡೀ ದೇಶದಲ್ಲಿ ಹಾವಳಿಯೆಬ್ಬಿಸುವ ಮುನ್ನ ಹಲವಾರು ದಿನಗಳವರೆಗೆ ಅದನ್ನು ಲಘುವಾಗಿ ಪರಿಗಣಿಸಿದ್ದ ಸರಕಾರದ ಬಗ್ಗೆ ಈಗಲೂ ಜನರಲ್ಲಿ ಶಂಕೆಯುಳಿದುಕೊಂಡಿದೆ.

ಕೊರೋನವೈರಸ್ ಸೋಂಕು ಹರಡುತ್ತಿದೆ ಮತ್ತು ಜನರು ಅದರಿಂದ ಸಾಯುತ್ತಿದ್ದಾರೆ. ತಮ್ಮ ಸುತ್ತ ಇತರ ಅಪಾಯಗಳೂ ಇವೆ ಎಂಬ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ ಎಂದು ಡಾ.ನಟ್ ಎರಿಕ್ ಹೋವ್ಡಾ ಹೇಳಿದರು. ಕ್ಲಿನಿಕಲ್ ಟಾಕ್ಸಿಕಾಲಜಿಸ್ಟ್ ಆಗಿರುವ ಹೋವ್ಡಾ ಒಸ್ಲೊದಲ್ಲಿ ಮಿಥೆನಾಲ್ ಪಾಯ್ಸನಿಂಗ್ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಜನರು ಮಿಥೆನಾಲ್ ಕುಡಿಯುತ್ತಿದ್ದರೆ ಇನ್ನಷ್ಟು ಜನರು ಅದರ ವಿಷಪೂರಿತ ಪರಿಣಾಮಗಳಿಗೆ ಸಿಲುಕಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News