ಟೋಕಿಯೊ ಒಲಿಂಪಿಕ್ಸ್ ಗೆ ಹೊಸ ದಿನಾಂಕ ಪ್ರಕಟ

Update: 2020-03-31 08:52 GMT

ಟೋಕಿಯೊ, ಮಾ.30: ಸರಿಯಾಗಿ ಒಂದು ವರ್ಷದ ಬಳಿಕ 2021ರ ಜುಲೈ 23ರಂದು ಟೋಕಿಯೊ ಒಲಿಂಪಿಕ್ ಗೇಮ್ಸ್ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಆಯೋಜಕರು ಸೋಮವಾರ ಘೋಷಿಸಿದ್ದಾರೆ.

 ಕೊರೋನ ವೈರಸ್ ವಿಶ್ವದಾದ್ಯಂತ ತನ್ನ ಕರಾಳ ಹಸ್ತ ಚಾಚಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಹಾಗೂ ಜಪಾನ್ ಆಯೋಜಕರು ಈ ವರ್ಷದ ಜುಲೈನಲ್ಲಿ ಆರಂಭವಾಗಬೇಕಾಗಿದ್ದ ಒಲಿಂಪಿಕ್ ಗೇಮ್ಸ್‌ನ್ನು 2021ಕ್ಕೆ ಮುಂದೂಡಲು ನಿರ್ಧರಿಸಿದ್ದರು.

 ಈ ವರ್ಷದ ಗೇಮ್ಸ್ ಜುಲೈ 24ರಿಂದ ಆರಂಭವಾಗಿ ಆಗಸ್ಟ್ 9ಕ್ಕೆ ಕೊನೆಯಾಗಬೇಕಾ ಗಿತ್ತು. ಆದರೆ, ಸರಿಯಾಗಿ ಒಂದು ವರ್ಷ ವಿಳಂಬವಾಗಿ ನಡೆಯಲಿರುವ ಒಲಿಂಪಿಕ್ಸ್ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಆಗಸ್ಟ್ 8ರಂದು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.

ಒಲಿಂಪಿಕ್ಸ್ ವಸಂತ ಋತುವಿನಲ್ಲಿ ನಡೆಯಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಯುರೋಪಿಯನ್ ಫುಟ್ಬಾಲ್ ಹಾಗೂ ಉತ್ತರ ಅಮೆರಿಕದ ಕ್ರೀಡಾ ಲೀಗ್‌ಗಳು ಇದೇ ಸಮಯದಲ್ಲಿ ನಡೆಯುತ್ತಿರುವ ಕಾರಣ ದಿನಾಂಕದ ಘರ್ಷಣೆ ಏರ್ಪಟ್ಟಿತ್ತು.

 ಅಥ್ಲೆಟಿಕ್ಸ್, ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಗಳು ಹಾಗೂ ಕ್ರೀಡಾ ಒಕ್ಕೂಟಗಳ ಒತ್ತಡದ ಬಳಿಕ ಸ್ಥಳೀಯ ಸಂಘಟಕರು ಹಾಗೂ ಐಒಸಿ ಟೋಕಿಯೊ ಗೇಮ್ಸ್‌ನ್ನು ಮುಂದೂಡಲು ಕಳೆದ ವಾರ ನಿರ್ಧರಿಸಿತ್ತು.

ಈ ಹಿಂದೆ ಯುದ್ಧದಿಂದಾಗಿ ಹಲವು ಬಾರಿ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತ್ತು. ಆದರೆ ಸಾಂಕ್ರಾಮಿಕ ರೋಗದ ಕಾರಣಕ್ಕೆ ಇದೇ ಮೊದಲ ಬಾರಿ ಗೇಮ್ಸ್ ಮುಂದೂಡಿಕೆಯಾಗಿದೆ.

‘‘ಒಲಿಂಪಿಕ್ ಗೇಮ್ಸ್ ಮರು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಉಂಟಾಗುವ ಖರ್ಚು-ವೆಚ್ಚ ಅಧಿಕ’’ ಎಂದು ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೊ ಮೊರಿ ಹಾಗೂ ಸಿಇಒ ಟೊಶಿರೊ ಮುಟೊ ತಿಳಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ ಗೇಮ್ಸ್ ಮುಂದೂಡಿಕೆಯಿಂದಾಗಿ ಅಂದಾಜು ಬಿಲಿಯನ್ ಡಾಲರ್‌ಗಳ ನಷ್ಟವಾಗಲಿದ್ದು, ಈ ಎಲ್ಲ ಖರ್ಚನ್ನು ಜಪಾನ್‌ನ ತೆರಿಗೆದಾರರೇ ಭರಿಸಬೇಕಾಗುತ್ತದೆ.

 ವೆಚ್ಚಗಳ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದು ಮುಟೊ ಭರವಸೆ ನೀಡಿದರು. ಜಪಾನ್ ದೇಶ ಒಲಿಂಪಿಕ್ಸ್ ಸಂಘಟಿಸಲು ಅಧಿಕೃತವಾಗಿ 12.6 ಬಿಲಿಯನ್ ಡಾಲರ್ ಖರ್ಚು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News