ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ತನಕ ಹೋರಾಟ: ಮೇರಿ ಕೋಮ್

Update: 2020-04-01 18:08 GMT

ಹೊಸದಿಲ್ಲಿ, ಎ.1: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವುದು ತನ್ನ ಗುರಿಯಾಗಿದೆ. ಇದಕ್ಕಾಗಿ ತಾನು ಗರಿಷ್ಠ ಪ್ರಯತ್ನ ನಡೆಸುವೆ . ತನ್ನ ಗುರಿ ಸಾಧಿಸುವವರೆಗೂ ಹೋರಾಟ ಮುಂದುವರಿಸುವೆ ಎಂದು ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಬುಧವಾರ ಹೇಳಿದ್ದಾರೆ.

ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ 51 ಕೆ.ಜಿ ವಿಭಾಗದಲ್ಲಿ 2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದರು. 2016ರಲ್ಲಿ ಆಕೆಗೆ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ.

ಆದಾಗ್ಯೂ, ಕಳೆದ ತಿಂಗಳು ಜೋರ್ಡನ್‌ನಲ್ಲಿ ನಡೆದ ಏಶ್ಯನ್ ಓಶಿಯಾನಿಯಾ ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ನಲ್ಲಿ ನಡೆದ ಮೆಗಾ ಕ್ವಾಡ್ರೆನಿಯಲ್ ಕ್ರೀಡಾಕೂಟದಲ್ಲಿ ಎರಡನೇ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಟೋಕಿಯೊ ಕ್ರೀಡಾಕೂಟ ಮುಂದಿನ ವರ್ಷದವರೆಗೆ ಮುಂದೂಡಲಾಗಿದೆ.

‘‘ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಚಿನ್ನ ಗೆಲ್ಲುವುದು ನನ್ನ ಗಮನ. ಈ ವಯಸ್ಸಿನಲ್ಲಿಯೂ ನಾನು ತುಂಬಾ ಶ್ರಮಿಸುತ್ತಿದ್ದೇನೆ. ಮುಂದಿನ ವರ್ಷದವರೆಗೆ ಮುಂದೂಡಲ್ಪಟ್ಟ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನನಗೆ ತುಂಬಾ ಕಷ್ಟಕರವಾಗಿತ್ತು’’ಎಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಗಾಗಿ ಫೇಸ್‌ಬುಕ್ ಲೈವ್ ಸೆಷನ್‌ನಲ್ಲಿ ಮೇರಿ ಕೋಮ್ ಹೇಳಿದ್ದಾರೆ.

‘‘ವಿಶ್ವ ಚಾಂಪಿಯನ್‌ಶಿಪ್ ಅಥವಾ ಒಲಿಂಪಿಕ್ಸ್ ನಲ್ಲಿ ಸಾಧಿಸಲು ನನಗೆ ಯಾವುದೇ ರಹಸ್ಯ ಮಂತ್ರ ಉಳಿದಿಲ್ಲ. ನಾನು ಹೋರಾಟ ಮಾಡುತ್ತೇನೆ ಮತ್ತು ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಚಿನ್ನ ಗೆಲ್ಲುವವರೆಗೂ ನಾನು ಅದನ್ನು ಹೋರಾಟ ಮುಂದುವರಿಸುವೆ’’ ಎಂದು ಅವರು ಹೇಳಿದರು.

ಅಮ್ಮಾನ್‌ನಿಂದ ಹಿಂದಿರುಗಿದಾಗಿನಿಂದ ಸರಕಾರವು ವಿಧಿಸಿರುವ ರಾಷ್ಟ್ರವ್ಯಾಪಿ-ಲಾಕ್‌ಡೌನ್ ನಿಂದಾಗಿ ಮೇರಿ ಕೋಮ್ ಮನೆ ಬಿಟ್ಟು ಹೊರ ಬಂದಿಲ್ಲ. ಆದಾಗ್ಯೂ, ಜುಲೈ 23 ರಿಂದ ಆಗಸ್ಟ್ 9, 2021 ರವರೆಗೆ ನಡೆಯಲಿರುವ ಟೋಕಿಯೊ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆಲ್ಲುವತ್ತ ಗಮನ ಹರಿಸಿದ್ದಾರೆ.

‘‘ನಾನು ಕ್ವಾರಂಟೈನ್‌ನಲ್ಲಿದ್ದರೂ ಸಹ ಮನೆಯಲ್ಲಿಯೂ ನನ್ನ ಸಿದ್ಧತೆಗಳನ್ನು ಮುಂದುವರಿಸುತ್ತಿದ್ದೇನೆ. ನನ್ನ ಗುರಿಯನ್ನು ಸಾಧಿಸಲು ನಾನು ಎಷ್ಟು ಸಾಧ್ಯವೋ ಅಷ್ಟು ಫಿಟ್‌ನೆಸ್ ಕಾಪಾಡಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಮನೆಯಲ್ಲಿ ಅದು ಕಷ್ಟಕರವಾಗುತ್ತದೆ. ಆದರೆ ನನ್ನ ಸಮಯವನ್ನು ನನ್ನ ಕುಟುಂಬದೊಂದಿಗೆ ನಾನು ಆನಂದಿಸುತ್ತೇನೆ’’ ಅವರು ಹೇಳಿದರು.

‘‘ನನ್ನ ಕನಸನ್ನು ಈಡೇರಿಸಲು ನನಗೆ ಇಡೀ ರಾಷ್ಟ್ರದ ಆಶೀರ್ವಾದ ಮತ್ತು ಪ್ರೀತಿ ಬೇಕು’’ ಎಂದು ಅವರು ಹೇಳಿದರು.

ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧವನ್ನು ಗೆಲ್ಲುವ ಸಲುವಾಗಿ ಮನೆಯೊಳಗಿದ್ದುಕೊಂಡು ಮತ್ತು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಜನರಲ್ಲಿ ಅವರು ಮನವಿ ಮಾಡಿದರು.

‘‘ಮನೆಯಲ್ಲಿ ಇರುವುದು ಕಷ್ಟ ಎಂದು ನನಗೆ ತಿಳಿದಿದೆ ಆದರೆ ಅದು ಅನಿವಾರ್ಯ. ನಮ್ಮ ಸ್ವಂತ ಲಾಭಕ್ಕಾಗಿ ನಾವು ಸರಕಾರದ ಸೂಚನೆಗಳನ್ನು ಪಾಲಿಸಬೇಕು’’ಎಂದಿರುವ ರಾಜ್ಯಸಭಾ ಸಂಸದೆ ಮೇರಿ ಕೋಮ್ ಇತ್ತೀಚೆಗೆ ತಮ್ಮ ಒಂದು ತಿಂಗಳ ವೇತನವನ್ನು ಕೋವಿಡ್ -19 ವಿರುದ್ಧ ಹೋರಾಟಕ್ಕೆ ಪ್ರಾರಂಭಿಸಲಾದ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದರು. ಇದಲ್ಲದೆ ಕೊರೋನ ವೈರಸ್ ಸಾಂಕ್ರಾಮಿಕದ ಮಧ್ಯೆ ಪರಿಹಾರ ಕಾರ್ಯಗಳಿಗಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿಯಿಂದ (ಎಂಪಿಎಎಲ್‌ಡಿಎಸ್) 1 ಕೋಟಿ ರೂ. ಬಿಡುಗಡೆಗೆ ಶಿಫಾರಸು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News