'ಡಬ್ಲ್ಯುಡಬ್ಲ್ಯುಇ' ಗೆ ಅಗತ್ಯ ಸೇವೆಗಳ ಸ್ಥಾನಮಾನ; ಕಾರ್ಯಕ್ರಮ ಪ್ರಸಾರ ಮರು ಆರಂಭ
ಫ್ಲೋರಿಡಾ: ಅಮೆರಿಕಾದ ಮನರಂಜನಾ ಮಾಧ್ಯಮ ಸಂಸ್ಥೆ ವರ್ಲ್ಡ್ ರೆಸ್ಲಿಂಗ್ ಎಂಟರ್‍ಟೈನ್ಮೆಂಟ್ ಅಥವಾ 'ಡಬ್ಲ್ಯುಡಬ್ಲ್ಯುಇ' ತನ್ನ ಬಹು ಜನಪ್ರಿಯ ಕುಸ್ತಿ ಪಂದ್ಯಗಳ ಪ್ರಸಾರವನ್ನು ಮರು ಆರಂಭಿಸಿದೆ. ಫ್ಲೋರಿಡಾ ಅಧಿಕಾರಿಗಳಿಂದ ತಮ್ಮ ಕಾರ್ಯಕ್ರಮಗಳಿಗೆ "ಅಗತ್ಯ ಸೇವೆಗಳ'' ಸ್ಥಾನಮಾನವನ್ನು ಸಂಸ್ಥೆ ಗಿಟ್ಟಿಸಿಕೊಂಡ ನಂತರ ಈ ಪ್ರಸಾರ ಆರಂಭಗೊಂಡಿದೆ.
ಕೊರೋನವೈರಸ್ ಹಾವಳಿಯಿಂದಾಗಿ ವಿಶ್ವದಾದ್ಯಂತ ಕ್ರೀಡೆ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳು ಬಂದ್ ಆಗಿದ್ದರೂ, ಆಸ್ಪತ್ರೆಗಳು, ಅಗ್ನಿ ಶಾಮಕ ದಳ, ದಿನಸಿ ಪೂರೈಕೆದಾರರು ಹಾಗೂ ಮಾನಸಿಕ ಆರೋಗ್ಯ ಸೇವಾ ಕಾರ್ಯಕರ್ತರ ಸೇವೆಗಳಂತೆ 'ಡಬ್ಲ್ಯುಡಬ್ಲ್ಯುಇ' ಕೂಡ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ಫ್ಲೋರಿಡಾದ ತುರ್ತುಪರಿಸ್ಥಿತಿ ನಿರ್ವಹಣಾ ನಿರ್ದೇಶಕರು ದೃಡಪಡಿಸಿದ ನಂತರ 'ಡಬ್ಲ್ಯುಡಬ್ಲ್ಯುಇ' ತನ್ನ ಕಾರ್ಯಕ್ರಮ ಪ್ರಸಾರ ಮರು ಆರಂಭಿಸಲು ತಡ ಮಾಡಿಲ್ಲ.
ಸೋಮವಾರ ಅದು ತನ್ನ ಸಾಪ್ತಾಹಿಕ ಸರಣಿ 'ರಾ' ಇದರ ನೇರ ಪ್ರಸಾರವನ್ನು ತನ್ನ ಒರ್ಲಾಂಡೋ ಪ್ರೊಡಕ್ಷನ್ ಸಂಸ್ಥೆ ಆವರಣದಿಂದ ಮಾಡಿದೆ.
"ಸಮಾಜದ ಅವಿಭಾಜ್ಯ ಅಂಗವಾಗಿರುವ ಬ್ರ್ಯಾಂಡ್ ಆಗಿ, ತನ್ನ ಸೂಪರ್ ಸ್ಟಾರ್‍ಗಳ ಮೂಲಕ ಕುಟುಂಬಗಳನ್ನು ಒಂದುಗೂಡಿಸುವ ಹಾಗೂ ಜನರಲ್ಲಿ ಆಶಾಭಾವನೆ ಮತ್ತು ದೃಢ ಮನೋಭಾವನೆಯನ್ನು ಬೆಳೆಸುವ ಕೆಲಸವನ್ನು ಡಬ್ಲ್ಯುಡಬ್ಲ್ಯುಇ ಮಾಡುತ್ತಿದೆ,'' ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ತನ್ನ ಕುಸ್ತಿ ಪಟುಗಳು ಹಾಗೂ ಇತರ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿಯೂ ಅದು ತಿಳಿಸಿದೆ.