×
Ad

ಶರತ್ ಕಮಲ್ ಭಾರತದ ಗರಿಷ್ಠ ರ‌್ಯಾಂಕಿನ ಆಟಗಾರ

Update: 2020-04-17 10:46 IST

ಹೊಸದಿಲ್ಲಿ, ಎ.16: ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಗುರುವಾರ ಸಹ ಆಟಗಾರ ಜಿ.ಸತ್ಯನ್‌ರನ್ನು ಹಿಂದಿಕ್ಕಿ ಐಟಿಟಿಎಫ್ ವರ್ಲ್ಡ್‌ರ್ಯಾಂಕಿಂಗ್‌ನಲ್ಲಿ ಗರಿಷ್ಠ ರ್ಯಾಂಕಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಏಳು ಸ್ಥಾನ ಭಡ್ತಿ ಪಡೆದಿರುವ ಶರತ್ 31ನೇ ಸ್ಥಾನಕ್ಕೇರಿದ್ದಾರೆ.

ಕಳೆದ ತಿಂಗಳು ಒಮಾನ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿರುವ ಹಿನ್ನೆಲೆಯಲ್ಲಿ ಶರತ್ ರ್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ಶರತ್ 10 ವರ್ಷಗಳ ಬಳಿಕ ಮೊದಲ ಬಾರಿ ಐಟಿಟಿಎಫ್ ಪ್ರಶಸ್ತಿ ಎತ್ತಿಹಿಡಿದಿದ್ದರು.

‘‘ಕೋವಿಡ್-19 ಪಿಡುಗಿನಿಂದಾಗಿ ಎಲ್ಲೆಡೆ ಋಣಾತ್ಮಕ ಸುದ್ದಿ ಬರುತ್ತಿರುವ ನಡುವೆ ಕೆಲವು ಧನಾತ್ಮಕ ಸುದ್ದಿಗಳು ಬರುತ್ತಿವೆ. ನನಗೆ ನಿಜವಾಗಿಯೂ ತುಂಬಾ ಹೆಮ್ಮೆ ಎನಿಸುತ್ತದೆ. ಈ ಲಾಕ್‌ಡೌನ್‌ನಲ್ಲಿ ನಾನು ಪಂದ್ಯದಿಂದ ದೂರವೇ ಉಳಿದಿದ್ದ ಕಾರಣ ಇಂತಹ ಸುದ್ದಿ ನನಗೆ ಅಗತ್ಯವಿತ್ತು’’ ಎಂದು ಶರತ್ ಹೇಳಿದ್ದಾರೆ.

ಶರತ್ ಅವರ ಕಿರಿಯ ಸಹ ಆಟಗಾರ ಸತ್ಯನ್ ರ್ಯಾಂಕಿಂಗ್‌ನಲ್ಲಿ ಹಿನ್ನಡೆ ಅನುಭವಿಸಿ 32ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಉದಯೋನ್ಮುಖ ಆಟಗಾರ ಮುದಿತ್ ದಾನಿ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದು ವೃತ್ತಿಜೀವನದಲ್ಲಿ ಮೊದಲ ಬಾರಿ ಅಗ್ರ-200ರಲ್ಲಿ ಸ್ಥಾನ ಪಡೆದಿದ್ದಾರೆ. ದಾನಿ 9 ಸ್ಥಾನಗಳಲ್ಲಿ ಭಡ್ತಿ ಪಡೆದು 200ನೇ ಸ್ಥಾನ ತಲುಪಿದರು. ಹರ್ಮೀತ್ ದೇಸಾಯಿ(72), ಅಂಥೋನಿ ಅಮಲ್‌ರಾಜ್(100) ಹಾಗೂ ಮಾನವ್ ಠಕ್ಕರ್(139)ಅಗ್ರ-100ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಭಾರತದ ಟೇಬಲ್ ಟೆನಿಸ್ ಪಟುಗಳಾಗಿದ್ದಾರೆ.

ಮಹಿಳೆಯರ ರ್ಯಾಂಕಿಂಗ್‌ನಲ್ಲಿ ಮಣಿಕಾ ಬಾತ್ರಾ 63ನೇ ಸ್ಥಾನದಲ್ಲಿದ್ದರೆ,ಸುತೀರ್ಥ ಮುಖರ್ಜಿ ಮೊದಲ ಬಾರಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದಾರೆ. ಮುಖರ್ಜಿ 14 ಸ್ಥಾನ ಭಡ್ತಿ ಪಡೆದು 95ನೇ ಸ್ಥಾನಕ್ಕೇರಿದ್ದಾರೆ.

ಟೇಬಲ್ ಟೆನಿಸ್ ಟೂರ್ನಿ ಆರಂಭವಾಗುವ ತನಕ ಇನ್ನು ಮುಂದೆ ಐಟಿಟಿಎಫ್ ರ್ಯಾಂಕಿಂಗ್‌ನಲ್ಲಿ ಬದಲಾವಣೆ ಆಗದು. ಕೋವಿಡ್-19ರಿಂದಾಗಿ ಜೂ.30ರ ತನಕ ಎಲ್ಲ ಟೂರ್ನಿಗಳನ್ನು ಐಟಿಟಿಎಫ್ ಅಮಾನತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News