ಗುವಾಂಗ್‌ಝೂನಲ್ಲಿ ತಲೆಎತ್ತಲಿದೆ ಬೃಹತ್ ಫುಟ್ಬಾಲ್ ಸ್ಟೇಡಿಯಂ
ಶಾಂಘೈ, ಎ.16: ಚೈನೀಸ್ ಚಾಂಪಿಯನ್ಸ್ ಗುವಾಂಗ್‌ಝೂ ಎವೆರ್‌ಗ್ರಾಂಡೆ ಗುರುವಾರ 12 ಬಿಲಿಯನ್ ಯುವಾನ್(1.7 ಬಿಲಿಯನ್ ಡಾಲರ್)ವೆಚ್ಚದ ಹಾಗೂ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ನೂತನ ಫುಟ್ಬಾಲ್ ಸ್ಟೇಡಿಯಂ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ್ದು, ಇದು ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂನ ಪೈಕಿ ಒಂದೆನಿಸಿಕೊಳ್ಳಲಿದೆ.
ಈ ಸ್ಟೇಡಿಯಂ ಬಾರ್ಸಿಲೋನದ ಖ್ಯಾತ ಕ್ಯಾಂಪ್‌ನೌ ಸ್ಟೇಡಿಯಂಗಿಂತ ಸ್ವಲ್ಪ ದೊಡ್ಡದಾಗಿರಲಿದೆ. 2022ರ ಅಂತ್ಯಕ್ಕೆ ಸ್ಟೇಡಿಯಂ ಸಜ್ಜಾಗಲಿದೆ ಎಂದು ಚೀನಾ ನ್ಯೂಸ್ ಏಜೆನ್ಸಿ ತಿಳಿಸಿದೆ.
ಗುವಾಂಗ್‌ಝೂನ ಎವೆರ್‌ಗ್ರಾಂಡೆ ಫುಟ್ಬಾಲ್ ಸ್ಟೇಡಿಯಂ ಸುತ್ತಲೂ ಚಿತ್ತಾಕರ್ಷಕ ಕಮಲದ ಹೂವಿನ ವಿನ್ಯಾಸವನ್ನು ಹೊಂದಿರಲಿದೆ.
ಕ್ಯಾಂಪ್‌ನೌ ಸ್ಟೇಡಿಯಂ ಇದೀಗ ನವೀಕರಣಗೊಳ್ಳುತ್ತಿದ್ದು, ಆಸನದ ಸಾಮರ್ಥ್ಯ 1,05,000ಕ್ಕೇರಲಿದೆ. ಅಲ್ಲಿಯ ತನಕ ಗುವಾಂಗ್‌ಝೂ ಸ್ಟೇಡಿಯಂ ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
8 ಬಾರಿಯ ಚೈನೀಸ್ ಚಾಂಪಿಯನ್ಸ್ ಗುವಾಂಗ್‌ಝೂ ತಂಡಕ್ಕೆ ಇಟಲಿಯ ವಿಶ್ವಕಪ್ ವಿಜೇತ ಫ್ಯಾಬಿಯೊ ಕ್ಯಾನವರೊ ಕೋಚ್ ಆಗಿದ್ದು, ಈ ತಂಡ ಎರಡು ಬಾರಿ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಜಯಿಸಿತ್ತು. ಸ್ವದೇಶದ ಪಂದ್ಯಗಳಲ್ಲಿ ಸರಾಸರಿ 50,000 ಅಭಿಮಾನಿಗಳು ಹಾಜರಾಗುತ್ತಾರೆ.
ಚೀನಾವು 2021ರ ಫಿಫಾ ಕ್ಲಬ್ ವಿಶ್ವಕಪ್ ಹಾಗೂ 2023ರ ಎಎಫ್‌ಸಿ ಏಶ್ಯನ್ ಕಪ್‌ನ ಆತಿಥ್ಯವಹಿಸಿಕೊಂಡಿದೆ. ಶಾಂೈ ಒಲಿಂಪಿಕ್ಸ್ ಆತಿಥ್ಯವಹಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದೆ.