ಬ್ರೆಝಿಲ್: ಆರೋಗ್ಯ ಸಚಿವರ ವಜಾ

Update: 2020-04-17 14:36 GMT

ಬ್ರೆಸೀಲಿಯ (ಬ್ರೆಝಿಲ್), ಎ. 17: ಅಧ್ಯಕ್ಷ ಜೈರ್ ಬೊಲ್ಸೊನಾರೊ ನನ್ನನ್ನು ವಜಾಗೊಳಿಸಿದ್ದಾರೆ ಎಂದು ಬ್ರೆಝಿಲ್ ಆರೋಗ್ಯ ಸಚಿವ ಲೂಯಿಸ್ ಹೆನ್ರಿಕ್ ಮ್ಯಾಂಡೆಟ ಗುರುವಾರ ತಿಳಿಸಿದ್ದಾರೆ. ಕೊರೋನ ವೈರಸ್ ಸಾಂಕ್ರಾಮಿಕವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಇವರಿಬ್ಬರ ನಡುವೆ ಹಲವು ವಾರಗಳಿಂದ ತಿಕ್ಕಾಟ ನಡೆದ ಬಳಿಕ ಈ ಬೆಳವಣಿಗೆ ನಡೆದಿದೆ.

ರಾಜಧಾನಿ ಬ್ರೆಸೀಲಿಯದಲ್ಲಿರುವ ಅಧ್ಯಕ್ಷೀಯ ಅರಮನೆಯಲ್ಲಿ ಬೊಲ್ಸೊನಾರೊರನ್ನು ಭೇಟಿಯಾದ ಬಳಿಕ, ಮ್ಯಾಂಡೆಟ ಟ್ವಿಟರ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಸಾಂಕ್ರಾಮಿಕ ಹರಡುವುದನ್ನು ತಡೆಯಲು ಅಂತರ ಕಾಪಾಡಿಕೊಳ್ಳುವುದಕ್ಕೆ ಮ್ಯಾಂಡೆಟ ಪ್ರಾಶಸ್ತ್ಯ ನೀಡಿದರೆ, ಕೊರೋನವೈರಸ್ ಬೆದರಿಕೆಯನ್ನು ಮಿತಿ ಮೀರಿ ಹಿಗ್ಗಿಸಲಾಗಿದೆ ಎಂದು ಅಧ್ಯಕ್ಷರು ಪದೇ ಪದೇ ಹೇಳುತ್ತಾ ಬಂದಿದ್ದಾರೆ.

ಈ ಪ್ರಕಟನೆಯ ಬೆನ್ನಿಗೇ, ಹಲವು ಪಟ್ಟಣಗಳ ಜನರು ಆರೋಗ್ಯ ಸಚಿವರನ್ನು ವಜಾಗೊಳಿಸಿರುವುದನ್ನು ಪ್ರತಿಭಟಿಸಿ ಕೊಡಗಳು ಮತ್ತು ತಟ್ಟೆಗಳನ್ನು ಬಡಿದರು.

ಆರೋಗ್ಯ ಸಚಿವರು ಅಧ್ಯಕ್ಷರ ಆದೇಶಗಳನ್ನು ಧಿಕ್ಕರಿಸಿ, ಕೋವಿಡ್-19 ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳನ್ನು ಪಾಲಿಸುತ್ತಿದ್ದರು ಹಾಗೂ ದೇಶಕ್ಕೆ ಬೇಕಾದ ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಲು ಚೀನಾದೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News