×
Ad

ಭಾರತಕ್ಕೆ ಗಡಿಪಾರು ಪ್ರಶ್ನಿಸಿದ ಮಲ್ಯ ಮೇಲ್ಮನವಿ ತಿರಸ್ಕರಿಸಿದ ಲಂಡನ್ ಹೈಕೋರ್ಟ್

Update: 2020-04-20 21:51 IST

ಲಂಡನ್, ಎ. 20: ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿರುವ ಪ್ರಕರಣದಲ್ಲಿ, ವಿಚಾರಣೆಯನ್ನು ಎದುರಿಸಲು ಉದ್ಯಮಿ ವಿಜಯ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂಬ ನ್ಯಾಯಾಲಯವೊಂದರ ತೀರ್ಪನ್ನು ಲಂಡನ್ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಇದರೊಂದಿಗೆ, ತೀರ್ಪನ್ನು ಪ್ರಶ್ನಿಸಿ ಲಂಡನ್ ಹೈಕೋರ್ಟ್‌ಗೆ ಹೋಗಿದ್ದ ಮಲ್ಯಗೆ ಭಾರೀ ಹಿನ್ನಡೆಯಾಗಿದೆ. ಇನ್ನು ಈ ಪ್ರಕರಣದಲ್ಲಿ ಅಂತಿಮ ನಿರ್ಧಾರವನ್ನು ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ತೆಗೆದುಕೊಳ್ಳಲಿದ್ದಾರೆ.

ಹೈಕೋರ್ಟ್‌ನ ತೀರ್ಪನ್ನು ಇನ್ನು ವಿಜಯ ಮಲ್ಯ ಬ್ರಿಟನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಅವರಿಗೆ ಇನ್ನು 14 ದಿನಗಳ ಕಾಲಾವಕಾಶವಿದೆ.

ಅವರು ಅರ್ಜಿ ಸಲ್ಲಿಸಿದರೆ, ಅದರ ಫಲಿತಾಂಶಕ್ಕಾಗಿ ಬ್ರಿಟನ್ ಗೃಹ ಕಚೇರಿಯು ಕಾಯಲಿದೆ. ಒಂದು ವೇಳೆ ಅವರು ಅರ್ಜಿ ಸಲ್ಲಿಸದಿದ್ದರೆ, ಭಾರತ-ಬ್ರಿಟನ್ ಗಡಿಪಾರು ಒಪ್ಪಂದದಂತೆ, 28 ದಿನಗಳೊಳಗೆ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ನ್ಯಾಯಾಲಯದ ಆದೇಶಕ್ಕೆ ಗೃಹ ಕಚೇರಿಯು ಅನುಮೋದನೆ ನೀಡಬಹುದಾಗಿದೆ.

64 ವರ್ಷದ ಮಲ್ಯ ತನ್ನ ಕಿಂಗ್‌ಫಿಶರ್ ಏರ್‌ಲೈನ್ಸ್ ಕಂಪೆನಿಗಾಗಿ ಪಡೆದುಕೊಂಡಿದ್ದ 9,000 ಕೋಟಿ ರೂಪಾಯಿ ಸಾಲವನ್ನು ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪವನ್ನು ಮಲ್ಯ ನಿರಾಕರಿಸಿದ್ದಾರೆ ಹಾಗೂ ಅವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.

ಕೊರೋನವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ, ಸೋಮವಾರ ವೀಡಿಯೊಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಲಂಡನ್‌ನ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್‌ನ ಇಬ್ಬರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು, ಮಲ್ಯರ ಮೇಲ್ಮನವಿಯನ್ನು ತಳ್ಳಿಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News