ಅಮೆರಿಕ: ಒಂದು ದಿನದಲ್ಲಿ 1,997 ಸಾವು
ವಾಶಿಂಗ್ಟನ್, ಎ. 20: ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್‌ಗೆ 1,997 ಮಂದಿ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ತಿಳಿಸಿವೆ. ಇದರೊಂದಿಗೆ ರವಿವಾರದವರೆಗೆ ಆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆ 40,661ಕ್ಕೆ ಏರಿದೆ.
ಇದಕ್ಕೂ ಮೊದಲಿನ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,891 ಸಾವುಗಳು ಸಂಭವಿಸಿದ್ದವು. ಬುಧವಾರ ಈ ಸಂಖ್ಯೆಯು 2,500ನ್ನು ಮೀರಿತ್ತು. ಕೊರೋನ ವೈರಸ್ ಸಾವಿನಲ್ಲಿ ಅಮೆರಿಕವು ಇತರೆಲ್ಲ ದೇಶಗಳಿಗಿಂತ ಮುಂದಿದೆ.
ಜಾನಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ ರವಿವಾರ 7,59,086ನ್ನು ತಲುಪಿದೆ.
ನ್ಯೂಯಾರ್ಕ್‌ನಲ್ಲಿ ರೋಗದ ತೀವ್ರತೆ ಇಳಿಕೆ: ಗವರ್ನರ್
ನ್ಯೂಯಾರ್ಕ್, ಎ. 20: ಅಮೆರಿಕದ ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟದ ಕೇಂದ್ರ ಬಿಂದುವಾಗಿರುವ ನ್ಯೂಯಾರ್ಕ್‌ನಲ್ಲಿ ರೋಗದ ತೀವ್ರತೆಯು ಇಳಿಯುತ್ತಿದೆ ಎಂದು ನ್ಯೂಯಾರ್ಕ್ ಗವರ್ನರ್ ಆ್ಯಂಡ್ರೂ ಕುವೋಮೊ ರವಿವಾರ ಘೋಷಿಸಿದ್ದಾರೆ.
‘‘ನಾವು ಸಾಂಕ್ರಾಮಿಕದ ಉತ್ತುಂಗ ಸ್ಥಿತಿಯನ್ನು ದಾಟಿ ಬಂದಿದ್ದೇವೆ ಹಾಗೂ ನಮ್ಮಲ್ಲಿ ರೋಗದ ತೀವ್ರತೆ ಇಳಿಯುತ್ತಿದೆ ಎನ್ನುವುದರತ್ತ ಎಲ್ಲ ಅಂಶಗಳು ಬೆಟ್ಟು ಮಡುತ್ತಿವೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುವೋಮೊ ಹೇಳಿದರು.