ದುರ್ಬಲ ಮಕ್ಕಳ ನೆರವಿಗೆ ಹರಾಜಿಗಾಗಿ ವಿಶ್ವಕಪ್‌ನ ಬ್ಯಾಟ್ ನೀಡಿದ ರಾಹುಲ್

Update: 2020-04-21 12:13 GMT

ಮುಂಬೈ, ಎ.21: ಭಾರತದಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ 2019ರ ವಿಶ್ವಕಪ್‌ನಲ್ಲಿ ಬಳಸಿದ್ದ ಬ್ಯಾಟ್ ಹಾಗೂ ಇತರ ತನ್ನ ಎಲ್ಲ ಕ್ರಿಕೆಟ್ ಸ್ಮರಣಿಕೆಗಳನ್ನು ಹರಾಜಿಗಿಡಲು ದೇಣಿಗೆ ನೀಡಿದ್ದಾರೆ. ಹರಾಜಿನಿಂದ ಬರುವ ಎಲ್ಲ ಮೊತ್ತವು ‘ಅವಾರೆ ಪ್ರತಿಷ್ಠಾನ’ದ ಪಾಲಾಗಲಿದೆ.

ಇತ್ತೀಚೆಗಷ್ಟೇ 28ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ಈ ಕುರಿತು ಮಾತನಾಡುತ್ತಾ,‘‘ನನ್ನ ಕ್ರಿಕೆಟ್ ಪ್ಯಾಡ್‌ಗಳು, ಗ್ಲೌಸ್‌ಗಳು, ಹೆಲ್ಮೆಟ್‌ಗಳು ಹಾಗೂ ಕೆಲವು ಜರ್ಸಿಗಳನ್ನು ನಮ್ಮ ಸಹಯೋಗ ಪಾಲುದಾರ ಭಾರತ್ ಆರ್ಮಿಗೆ ದೇಣಿಗೆ ನೀಡಲು ನಿರ್ಧರಿಸಿದ್ದೇನೆ. ಭಾರತ್ ಆರ್ಮಿ ಈ ಎಲ್ಲ ವಸ್ತುಗಳನ್ನು ಹರಾಜಿಗಿಡಲಿದೆ. ಇದರಿಂದ ಸಂಗ್ರಹವಾಗುವ ಹಣ ‘ಅವಾರೆ ಪ್ರತಿಷ್ಠಾನ’ಕ್ಕೆ ಸೇರಲಿದೆ. ಈ ಪ್ರತಿಷ್ಠಾನವು ದುರ್ಬಲ ಮಕ್ಕಳಿಗೆ ನೆರವು ನೀಡುತ್ತದೆ. ಇದು ನನಗೆ ವಿಶೇಷ ದಿನ. ಇದಕ್ಕಿಂತ ಉತ್ತಮ ದಿನ ಬೇರೆ ಇಲ್ಲ’’ಎಂದರು.

ಈ ಹಿಂದೆ ಕೂಡ ರಾಹುಲ್ ಹಲವು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಹಣವನ್ನು ದೇಣಿಗೆ ನೀಡಿದ್ದರು. ಕಳೆದ ವರ್ಷ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗುವಿಗೆ ಸಹಾಯಹಸ್ತ ಚಾಚಿದ್ದರು. ಆ ಮಗು ಇದೀಗ ಕಾಯಿಲೆಯಿಂದ ಸಂಪೂರ್ಣ ಗುಣಮುಖವಾಗಿದೆ.

ದತ್ತಿನಿಧಿ ಸಂಸ್ಥೆಗಳನ್ನು ಬೆಂಬಲಿಸಲು ರಾಹುಲ್ ನಿಯಮಿತವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಸಮಾಜದ ಬಡಜನರ ಹಸಿವು ನೀಗಿಸುವ ‘ವರ್ಷಾ’ ಎಂಬ ಚಾರಿಟೇಬಲ್ ಸಂಸ್ಥೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ಅನಾಥ ಪ್ರಾಣಿಗಳನ್ನು ಸಲಹುವ‘ಸ್ಟ್ರೇ ಹ್ಯಾಪಿ’ ಸಂಸ್ಥೆಗೂ ರಾಹುಲ್ ಬೆಂಬಲ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News