60 ದಿನ ವಿದೇಶೀಯರಿಗೆ ಅಮೆರಿಕ ಪ್ರವೇಶವಿಲ್ಲ: ಟ್ರಂಪ್
ವಾಶಿಂಗ್ಟನ್, ಎ. 22: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಕೆಲಸವಿಲ್ಲದಿರುವ ಅಮೆರಿಕನ್ನರಿಗೆ ನೆರವಾಗುವುದಕ್ಕಾಗಿ ಕನಿಷ್ಠ ಎರಡು ತಿಂಗಳವರೆಗೆ ವಿದೇಶಗಳಿಂದ ಜನರು ಅವೆುರಿಕಕ್ಕೆ ವಲಸೆ ಬರುವುದನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘‘ಕೊರೋನ ವೈರಸ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಅಮೆರಿಕನ್ನರ ಜಾಗದಲ್ಲಿ ವಿದೇಶದಿಂದ ಬರುವ ಹೊಸಬರನ್ನು ನೇಮಿಸುವುದು ತಪ್ಪು ಮತ್ತು ಅನ್ಯಾಯ’’ ಎಂದು ಮಂಗಳವಾರ ಸಂಜೆ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದರು. ‘‘ನಾವು ಮೊದಲು ಅಮೆರಿಕದ ಕೆಲಸಗಾರರ ಹಿತವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ’’ ಎಂದರು.
ವಲಸೆ ನಿರ್ಬಂಧವು 60 ದಿನಗಳ ಕಾಲ ಜಾರಿಯಲ್ಲಿರುತ್ತದೆ ಹಾಗೂ ಅಮೆರಿಕದಲ್ಲಿ ಖಾಯಂ ವಾಸ್ತವ್ಯವನ್ನು ಬಯಸುವವರಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಟ್ರಂಪ್ ಹೇಳಿದರು.
ಕೃಷಿ ಕಾರ್ಮಿಕರು, ಆರೋಗ್ಯ ಕೆಲಸಗಾರರಿಗೆ ವಿನಾಯಿತಿ
ವಲಸೆಯನ್ನು ನಿರ್ಬಂಧಿಸುವ ಆದೇಶದಲ್ಲಿ ಕೆಲವೊಂದು ವಿನಾಯಿತಿಗಳಿರುತ್ತವೆ ಹಾಗೂ ಕೆಲವರಿಗೆ ದೇಶಕ್ಕೆ ಬರಲು ಅವಕಾಶ ನೀಡಲಾಗುತ್ತದೆ ಎಂದರು. ಕೃಷಿ ಕಾರ್ಮಿಕರಿಗೆ ವಿನಾಯಿತಿ ನೀಡಲಾಗುತ್ತದೆ ಎನ್ನಲಾಗಿದೆ. ‘‘ಈ ಆದೇಶದಿಂದ ಕಾರ್ಮಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ’’ ಎಂದು ಟ್ರಂಪ್ ಹೇಳಿದ್ದಾರೆ.
ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಸಂಶೋಧನೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ನಿರ್ಬಂಧವು ಅನ್ವಯವಾಗುವುದಿಲ್ಲ ಎಂದು ಆದೇಶದ ಕರಡು ಪ್ರತಿಯಲ್ಲಿ ಹೇಳಲಾಗಿದೆ ಎಂದು ‘ಬ್ಲೂಮ್‌ಬರ್ಗ್’ ಮಾಧ್ಯಮ ಹೇಳಿದೆ.
ಎಚ್-1ಬಿ ವೀಸಾದಾರರಿಂದ ಪ್ರಮಾಣಪತ್ರ ಸಲ್ಲಿಕೆ
ಅದೇ ವೇಳೆ, ಎಚ್-1ಬಿ ವೀಸಾದಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ತಂತ್ರಜ್ಞಾನ ಉದ್ಯಮದ ಉದ್ಯೋಗಿಗಳು, ನಾವು ಅಮೆರಿಕದ ಉದ್ಯೋಗಿಗಳ ಸ್ಥಾನದಲ್ಲಿ ಕೆಲಸ ಮಾಡುವುದಿಲ್ಲ ಎಂಬುದಾಗಿ ಘೋಷಿಸುವ ಹೊಸ ಪ್ರಮಾಣಪತ್ರಗಳನ್ನು ಸರಕಾರಕ್ಕೆ ಸಲ್ಲಿಸಬೇಕು.
ನಿರಾಶ್ರಿತರು ಮತ್ತು ಆಶ್ರಯ ಕೋರಿ ಬಂದಿರುವವರ ಮೇಲೆ ಹಾಗೂ ಅಮೆರಿಕದ ನಾಗರಿಕರು ಮತ್ತು ಖಾಯಂ ನಿವಾಸಿಗಳ ಸಂಗಾತಿಗಳು ಮತ್ತು ಮಕ್ಕಳ ಮೇಲೆಯೂ ನೂತನ ಆದೇಶವು ಯಾವುದೇ ಪರಿಣಾಮ ಬೀರುವುದಿಲ್ಲ.
ವಿದೇಶೀಯರೊಂದಿಗೆ ಅಮೆರಿಕನ್ನರು ಸ್ಪರ್ಧಿಸಿದರೆ ಆರ್ಥಿಕತೆ ಪುನಶ್ಚೇತನ ಸಾಧ್ಯವಿಲ್ಲ: ಟ್ರಂಪ್
‘‘ವಿದೇಶಿ ಕೆಲಸಗಾರರಿಂದಾಗಿ ಕೃತಕವಾಗಿ ವಿಸ್ತರಿಸಲ್ಪಟ್ಟಿರುವ ಕೆಲಸಗಾರರ ಸಮೂಹದೊಂದಿಗೆ ಸ್ಪರ್ಧಿಸುವ ಅನಿವಾರ್ಯತೆಗೆ ಅಮೆರಿಕನ್ನರು ಒಳಗಾದರೆ, ದೇಶಿ ಆರ್ಥಿಕತೆಗೆ ಪುನಶ್ಚೇತನ ನೀಡಲು ನಮಗೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ’’ ಎಂದು ಕರಡು ಆದೇಶದಲ್ಲಿ ಟ್ರಂಪ್ ಹೇಳಿದ್ದಾರೆ.
‘‘ತಕ್ಷಣದಲ್ಲಿ ಖಾಸಗಿ ಅಥವಾ ತಾತ್ಕಾಲಿಕ ಕೆಲಸಗಾರರಾಗಿ ಅವೆುರಿಕವನ್ನು ಪ್ರವೇಶಿಸಲು ವಿದೇಶೀಯರಿಗೆ ಅನುಮತಿ ನೀಡಿದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಾನು ನಿರ್ಧರಿಸಿದ್ದೇನೆ’’ ಎಂದು ಅವರು ಹೇಳಿದ್ದಾರೆ.