ಕೊರೋನ ವೈರಸ್ ತುಂಬಾ ಸಮಯ ನಮ್ಮ ಜೊತೆಗಿರುತ್ತದೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2020-04-23 16:30 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 23: ನೋವೆಲ್-ಕೊರೋನವೈರಸ್ ಇಲ್ಲೇ ಇರುತ್ತದೆ, ಎಲ್ಲೂ ಹೋಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಬುಧವಾರ ಎಚ್ಚರಿಸಿದೆ. ಹಲವು ದೇಶಗಳು ಮಾರಕ ಸೋಂಕಿನ ವಿರುದ್ಧದ ಹೋರಾಟದ ಆರಂಭಿಕ ಹಂತದಲ್ಲೇ ಇವೆ ಎಂದು ಅದು ಹೇಳಿದೆ.

‘‘ನಾವಿನ್ನೂ ತುಂಬಾ ದೂರ ಸಾಗಬೇಕಾಗಿದೆ. ಇದು ಖಂಡಿತ. ಕೊರೋನ ವೈರಸ್ ತುಂಬಾ ಸಮಯ ನಮ್ಮಲ್ಲೇ ಇರುತ್ತದೆ. ಮನೆಯಲ್ಲೇ ಇರಲು ಹೊರಡಿಸಲಾಗಿರುವ ಆದೇಶಗಳು ಹಾಗೂ ಇತರ ದೈಹಿಕ ಅಂತರ ಕಾಪಾಡಿಕೊಳ್ಳುವ ಕ್ರಮಗಳು ಹಲವು ದೇಶಗಳಲ್ಲಿ ಸೋಂಕು ಹರಡುವಿಕೆಯನ್ನು ಯಶಸ್ವಿಯಾಗಿ ತಡೆದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಬುಧವಾರ ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘‘ಹೆಚ್ಚಿನ ದೇಶಗಳು ಸಾಂಕ್ರಾಮಿಕದ ವಿರುದ್ಧದ ಹೋರಾಟದ ಆರಂಭಿಕ ಹಂತಗಳಲ್ಲಿವೆ. ಆರಂಭದಲ್ಲೇ ಹಾನಿಗೆ ಒಳಗಾಗಿರುವ ಕೆಲವು ದೇಶಗಳಲ್ಲಿ ಸೋಂಕು ಪ್ರಮಾಣ ಮತ್ತೆ ಹೆಚ್ಚುತ್ತಿದೆ’’ ಎಂದು ಅವರು ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕದ ಸೋಂಕು ಜಗತ್ತಿನಾದ್ಯಂತ 26 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ ಹಾಗೂ 1.85 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News