ಗಾಯದ ಸಮಸ್ಯೆಯಿಂದ ಹೊರಬಂದ ಭುವನೇಶ್ವರ

Update: 2020-04-25 06:32 GMT

ಹೊಸದಿಲ್ಲಿ: ವೇಗದ ಬೌಲರ್‌ಗಳಿಗೂ ಹಾಗೂ ಗಾಯಕ್ಕೂ ಅವಿನಾಭಾವ ಸಂಬಂಧ. ಭಾರತ ಕ್ರಿಕೆಟಿಗ ಭುವನೇಶ್ವರ ಕುಮಾರ್ ಇದರಿಂದ ಭಿನ್ನರಲ್ಲ. ತೊಡೆಸಂದು ನೋವಿನಿಂದ ಬಳಲುತ್ತಿದ್ದ ಕುಮಾರ್ ಬಳಿಕಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ನ್ಯೂಝಿಲ್ಯಾಂಡ್ ಪ್ರವಾಸದಿಂದ ಹೊರಗುಳಿದಿದ್ದರು.

 30ರ ಹರೆಯದ ಕುಮಾರ್ ಜನವರಿಯಲ್ಲಿ ಲಂಡನ್‌ನಲ್ಲಿ ಸರ್ಜರಿಗೆ ಒಳಗಾಗಿದ್ದರು. ಭಾರತಕ್ಕೆ ವಾಪಸಾದ ಬಳಿಕ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು. ಆ ನಂತರ ಸಕ್ರಿಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು.

ಮೀರತ್‌ನ ‘ಸ್ವಿಂಗ್ ಕಿಂಗ್’ಖ್ಯಾತಿಯ ಕುಮಾರ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ಪರ ಕೊನೆಯ ಬಾರಿ ಪಂದ್ಯ ಆಡಿದ್ದರು.

ಕುಮಾರ್ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಭಾರತೀಯ ಕ್ರಿಕೆಟ್ ತಂಡಕ್ಕೆ ವಾಪಸಾಗಲು ಬಯಸಿದ್ದಾರೆ.

‘‘ಇದೀಗ ನಾನು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವೆ. ಪ್ರಯಾಣ, ತರಬೇತಿ ಹಾಗೂ ಹೊರಾಂಗಣ ಚಟುವಟಿಕೆಗಳಲ್ಲಿ ಸದಾ ಒಗ್ಗಿಕೊಂಡಿರುವ ನನ್ನಂತಹ ವ್ಯಕ್ತಿಗೆ ಮನೆಯೊಳಗೆ ಇರುವುದು ತುಂಬಾ ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಅಥ್ಲೀಟ್ ಆಗಿ ಮನೆಯಲ್ಲಿ ಸುರಕ್ಷಿತವಾಗಿದ್ದರೂ ಫಿಟ್ನೆಸ್‌ನತ್ತ ಆದ್ಯತೆ ನೀಡುವ ಅಗತ್ಯವಿದೆ’’ಎಂದು ಹೇಳಿದರು.

ವೇಗವಾಗಿ ಹಬ್ಬುತ್ತಿರುವ ಕೊರೋನ ವೈರಸ್‌ನಿಂದಾಗಿ ಇಡೀ ದೇಶ ಲಾಕ್‌ಡೌನ್ ಆಗಿದ್ದು, ಬಲಗೈ ವೇಗದ ಬೌಲರ್ ಫಿಟ್ ಆಗಿರಲು ಸ್ಕೈಪಿಂಗ್ ಹಾಗೂ ಬಾಡಿವೇಟ್ ಟ್ರೈನಿಂಗ್‌ನಲ್ಲಿ ವ್ಯಸ್ತರಾಗಿದ್ದಾರೆ.

2019ರ ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭುವನೇಶ್ವರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಗ್ರಾಂಡ್‌ಹೋಮ್, ಟಾಮ್ ಲಥಾಮ್ ಹಾಗೂ ಮ್ಯಾಟ್ ಹೆನ್ರಿ ಅವರನ್ನು ಔಟ್ ಮಾಡಿದ್ದ ಭುವಿ ನ್ಯೂಝಿಲ್ಯಾಂಡ್‌ನ್ನು 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 239 ರನ್‌ಗೆ ನಿಯಂತ್ರಿಸಲು ಪ್ರಮುಖ ಪಾತ್ರವಹಿಸಿದ್ದರು. ಕುಮಾರ್ ಪ್ರಯತ್ನದ ಹೊರತಾಗಿಯೂ ಟೂರ್ನಿಯ ಫೇವರಿಟ್ ತಂಡ ಭಾರತ 18 ರನ್‌ಗಳಿಂದ ಪಂದ್ಯವನ್ನು ಸೋತು ಟೂರ್ನಿಯಿಂದ ಹೊರ ನಡೆದಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಭುವಿ 5.20ರ ಎಕಾನಮಿ ರೇಟ್‌ನಲ್ಲಿ 6 ಪಂದ್ಯಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಉರುಳಿಸಿದ್ದರು. ಭುವನೇಶ್ವರ ಅಂತರ್‌ರಾಷ್ಟ್ರೀಯ, ದೇಶಿಯ ಟೂರ್ನಿಗಳಲ್ಲಿ ಮಾತ್ರವಲ್ಲ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದಾರೆ. 2014ರಲ್ಲಿ ಹೈದರಾಬಾದ್ ತಂಡ ಸೇರ್ಪಡೆಯಾಗಿದ್ದ ಅವರು ಎರಡೂ ಬದಿಗಳಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ತನ್ನ ಸಾಮರ್ಥ್ಯದಿಂದ 2016(17 ಪಂದ್ಯ, 23 ವಿಕೆಟ್) ಹಾಗೂ 2017ರಲ್ಲಿ(26 ವಿಕೆಟ್, 14 ಪಂದ್ಯ)ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದು ‘ಪರ್ಪಲ್ ಕ್ಯಾಪ್’ ಧರಿಸಿದ್ದರು. 2016ರ ಆವೃತ್ತಿಯ ಐಪಿಎಲ್‌ನಲ್ಲಿ ಹೈದರಾಬಾದ್ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಸನ್‌ರೈಸರ್ಸ್ ತಂಡ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿಯನ್ನು ಫೈನಲ್‌ನಲ್ಲಿ 8 ರನ್‌ನಿಂದ ಸೋಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News