ಐಸಿಸಿ ಮುಖ್ಯಸ್ಥರಾಗಿ ಮನೋಹರ್ ಎರಡು ತಿಂಗಳು ಮುಂದುವರಿಕೆ?
ಹೊಸದಿಲ್ಲಿ: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಮುಖ್ಯಸ್ಥ ಶಶಾಂಕ್ ಮನೋಹರ್ ಜೂನ್‌ನಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರೀಕ್ಷೆಯಿತ್ತು. ಆದರೆ, ಕೋವಿಡ್-19 ರಿಂದಾಗಿ ಐಸಿಸಿಯ ಮಂಡಳಿ ಸಭೆ ಮುಂದೂಡಲ್ಪಟ್ಟ ಕಾರಣ ಮನೋಹರ್ ಇನ್ನೆರಡು ತಿಂಗಳು ಇದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಅಧ್ಯಕ್ಷ ಕಾಲಿನ್ ಗ್ರೇವ್ಸ್ ಮಾಜಿ ಬಿಸಿಸಿಐ ಅಧ್ಯಕ್ಷ ಮನೋಹರ್‌ರಿಂದ ತೆರವಾದ ಸ್ಥಾನ ತುಂಬುವ ಎಲ್ಲ ಸಾಧ್ಯತೆ ಇದೆ.
‘‘ಮನೋಹರ್ ಐಸಿಸಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದು ನಿಶ್ಚಿತ. ಜೂನ್‌ನಲ್ಲಿ ನಡೆಯಬೇಕಾಗಿರುವ ಐಸಿಸಿ ಮಂಡಳಿ ಸಭೆಯು ಜಾಗತಿಕ ಪರಿಸ್ಥಿತಿಯನ್ನು ಪರಿಗಣಿಸಿ ಮುಂದೂಡಲ್ಪಡುವ ಸಾಧ್ಯತೆಯಿದ್ದು, ಬಹುಶಃ ಮನೋಹರ್ ಇನ್ನೆರಡು ತಿಂಗಳು ಹುದ್ದೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಆಗಸ್ಟ್‌ನಲ್ಲಿ ಐಸಿಸಿಗೆ ಹೊಸ ಚೇರ್ಮನ್ ನೇಮಕವಾಗುವ ಸಾಧ್ಯತೆಯಿದೆ’’ ಎಂದು ಐಸಿಸಿ ಮಂಡಳಿ ಸದಸ್ಯರು ಪಿಟಿಐಗೆ ತಿಳಿಸಿದ್ದಾರೆ.
ಈ ಹಿಂದೆ ಹಾಂಕಾಂಗ್‌ನ ಇಮ್ರಾನ್ ಖ್ವಾಜಾ ಅವರು ಮನೋಹರ್ ಉತ್ತರಾಧಿಕಾರಿಯಾಗಲಿದ್ದಾರೆಂಬ ಇಂಗ್ಲೆಂಡ್ ಊಹಾಪೋಹ ಹಬ್ಬಿತ್ತು. ಆದರೆ, ಅವರಿಗೆ ಸಂಪೂರ್ಣ ಸದಸ್ಯರ ಬೆಂಬಲವಿಲ್ಲ. ಇಸಿಬಿ ಚೇರ್ಮನ್ ಗ್ರೇವ್ಸ್ 2020ರ ನವೆಂಬರ್‌ನಲ್ಲಿ ದೇಶದ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದು, ಐಸಿಸಿ ಉನ್ನತ ಹುದ್ದೆ ಅಲಂಕರಿಸಲಿರುವ ಫೇವರಿಟ್ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಗ್ರೇವ್ಸ್‌ಗೆಪ್ರಮುಖ ಟೆಸ್ಟ್ ಆಡುವ ದೇಶಗಳ ಬೆಂಬಲ ಸಿಗುವುದು ನಿಶ್ಚಿತ ಎಂದು ಐಸಿಸಿ ಮೂಲಗಳು ತಿಳಿಸಿವೆ.