ಅಮೆರಿಕ: ಮಿನೆಸೊಟದಲ್ಲಿ ಇದೇ ಮೊದಲ ಬಾರಿ ಮಸೀದಿಯಿಂದ ಹೊರಗೆ ಮೊಳಗಿತು ಅಝಾನ್ ಕರೆ

Update: 2020-04-25 13:37 GMT

ಮಿನೆಸೊಟ (ಅಮೆರಿಕ) , ಎ.25: ಇದೇ ಮೊದಲ ಬಾರಿಗೆ ಮಿನೆಸೊಟದಲ್ಲಿ ಗುರುವಾರ ಧ್ವನಿವರ್ಧಕದ ಮೂಲಕ ಮಸೀದಿಯ ಹೊರಗೆ ಕೇಳಿಸುವಂತೆ ಆಝಾನ್ ನೀಡಲಾಗಿದೆ. ಸಾಮಾನ್ಯವಾಗಿ ನಮಾಝ್ ಗೆ ಆಹ್ವಾನಿಸುವ ಕರೆ ( ಅಝಾನ್) ಯನ್ನು ಅಮೇರಿಕಾದ ಹೆಚ್ಚಿನ ಕಡೆಗಳಲ್ಲಿ ಮಸೀದಿ ಅಥವಾ ಕಮ್ಯೂನಿಟಿ ಸೆಂಟರ್ ನ ಒಳಗಿರುವವರಿಗೆ ಮಾತ್ರ ಕೇಳಿಸುವಂತೆ ನೀಡಲಾಗುತ್ತದೆ.

ಕೊರೊನ ಲಾಕ್ ಡೌನ್ ನಿಂದಾಗಿ ಸ್ಥಳೀಯ ಮುಸ್ಲಿಮರು ಮಸೀದಿಗೆ ಬರುವ ಅವಕಾಶವೂ ಇಲ್ಲ. ಆದ್ದರಿಂದ ಅವರಿಗೆ ರಮಝಾನ್ ತಿಂಗಳಲ್ಲಿ ಭಾವನಾತ್ಮಕವಾಗಿ ಸಮಾಧಾನ ಸಿಗುವಂತಾಗಲು ಮಿನೆಸೊಟ ಮೇಯರ್ ಜೇಕಬ್ ಫ್ರೆ ಎಲ್ಲರಿಗೂ ಕೇಳಿಸುವಂತೆ ಅಝಾನ್ ನೀಡಲು ಅನುಮತಿ ನೀಡಿದ್ದಾರೆ. ರಮಝಾನ್ ತಿಂಗಳ ಎಲ್ಲ ದಿನಗಳೂ ದಿನದ ಐದೂ ಹೊತ್ತಿನ ನಮಾಝ್ ಗೆ ಮೊದಲು ಇದೇ ರೀತಿ ಅಝಾನ್ ನೀಡಲಾಗುವುದು.

ಲಾಕ್ ಡೌನ್ ನಿಂದ ಸಾಮೂಹಿಕ ನಮಾಝ್, ಇಫ್ತಾರ್ ಕೂಟ, ಸಾಮೂಹಿಕ ತರಾವೀಹ್ ನಮಾಝ್ ಇತ್ಯಾದಿಗಳನ್ನು ಕಳೆದುಕೊಂಡಿರುವ ಮುಸ್ಲಿಮರು ದಿನದ ಐದು ಹೊತ್ತು ಅಝಾನ್ ಕೇಳುವಂತಾಗಿದ್ದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಅಝಾನ್ ನಿಂದ ಒಗ್ಗಟ್ಟಿನ ಹಾಗು ಸಮಾಧಾನದ ಭಾವ ಮೂಡುತ್ತದೆ. ಅದು ಈ ಕಠಿಣ ಸಂದರ್ಭಗಳಲ್ಲಿ ಬಹಳ ಮುಖ್ಯ. ಈ ಕ್ರಮದಿಂದ ಸ್ಥಳೀಯ ಮುಸ್ಲಿಮರಿಗೆ ಸಂತಸ, ಸಮಾಧಾನ ಆಗಲಿದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಇದರಿಂದ ಧೈರ್ಯ ಸಿಗಲಿದೆ ಎಂದು ಮಿನೆಸೊಟ ಮೇಯರ್ ಜೇಕಬ್ ಫ್ರೆ ಹೇಳಿದ್ದಾರೆ. 

ಬ್ರಿಟನ್ ನಲ್ಲೂ ಮೊಳಗಿದ ಅಝಾನ್

ಕೊರೋನ ವೈರಸ್ ಹಿನ್ನೆಲೆಯಲ್ಲಿ ಮಸೀದಿಗಳು ಮುಚ್ಚಿರುವುದರಿಂದ ರಮಝಾನ್ ತಿಂಗಳಲ್ಲಿ ಮುಸ್ಲಿಮರಿಗಾಗಿ ಮಸೀದಿಗಳಲ್ಲಿ ಧ್ವನಿವರ್ಧಕಗಳಲ್ಲಿ ಅಝಾನ್ ನೀಡಲು ಬ್ರಿಟನ್ ನಲ್ಲೂ ಅವಕಾಶ ನೀಡಲಾಗಿದೆ.

ಇತ್ತೀಚೆಗಷ್ಟೇ ಬಿಬಿಸಿ ಅಝಾನ್ ಪ್ರಸಾರಗೊಳಿಸಿತ್ತು. ಇಷ್ಟೇ ಅಲ್ಲದೆ ಬಿಬಿಸಿಯು ಪ್ರತಿ ಶುಕ್ರವಾರ ಜುಮಾ ಪ್ರಾರ್ಥನೆಯನ್ನು ಪ್ರಸಾರ ಮಾಡಲಿದೆ. ಪ್ರತಿ ವಾರ ಬೆಳಗ್ಗೆ 5:50ಕ್ಕೆ ವಿವಿಧ ಇಮಾಮ್ ಗಳು ಜುಮಾ ಪ್ರಾರ್ಥನೆ ನಡೆಸಲಿದ್ದು, ಬಿಬಿಸಿಯ 14 ಸ್ಥಳೀಯ ರೇಡಿಯೋ ಸ್ಟೇಶನ್ ಗಳಲ್ಲಿ ಪ್ರಸಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News