ಚೀನಾ ನೆರವಿನಿಂದ ಲಸಿಕೆ ತಯಾರಿಸುತ್ತಿಲ್ಲ: ಪಾಕ್ ಸ್ಪಷ್ಟನೆ
ಇಸ್ಲಾಮಾಬಾದ್,ಎ.26: ಚೀನಾದ ನೆರವಿನೊಂದಿಗೆ ತಾನು ಕೊರೋನ ವೈರಸ್ ಸೋಂಕಿನ ವಿರುದ್ಧ ಲಸಿಕೆಯನ್ನು ಸಿದ್ಧಪಡಿಸುತ್ತಿದ್ದೇನೆಂಬ ವರದಿಗಳನ್ನು ಪಾಕಿಸ್ತಾನವು ನಿರಾಕರಿಸಿದೆ. ಈ ಮಧ್ಯೆ ಪಾಕಿಸ್ತಾನದಲ್ಲಿ ಕೊರೋನ ಸೋಂಕಿತರ ಸಂಖ್ಯೆ 12,644ಕ್ಕೇರಿದೆ.
ಪಾಕಿಸ್ತಾನದ ಆರೋಗ್ಯ ಸಚಿವ ಝಫರ್ ಮಿರ್ಝಾ ರವಿವಾರ ಸುದ್ದಿಗೋಷಿಯಲ್ಲಿ ಮಾತನಾಡಿ ಪ್ರಸಕ್ತ ದೇಶದಲ್ಲಿ ಯಾವುದೇ ಕೊರೋನ ವೈರಸ್ ನಿರೋಧಕ ಲಸಿಕೆ ಇರುವುದಿಲ್ಲ ಹಾಗೂ ಅದನ್ನು ಅಭಿವೃದ್ಧಿಪಡಿಸುವಂತಹ ಕೆಲಸವೂ ನಡೆಯುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ ಕೊರೋನ ನಿರೋಧಕ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಚೀನಾದ ಕಂಪೆನಿಯೊಂದು ಪಾಕಿಸ್ತಾನವನ್ನು ಸಂಪರ್ಕಿಸಿರುವುದನ್ನು ಮಿರ್ಜಾ ಒಪ್ಪಿಕೊಂಡಿದದ್ದಾರೆ. ಚೀನಾದ ಸಂಸ್ಥೆಯು ಲಸಿಕೆಯ ಕ್ಲಿನಿಕಲ್ ಪರೀಕ್ಷೆಗಳಲ್ಲಿೆ ಪಾಕಿಸ್ತಾನಕ್ಕೆ ಪಾಲುದಾರಿಕೆ ನೀಡುವ ಕೊಡುಗೆಯನ್ನು ಮುಂದಿಟ್ಟಿದೆ. ಈ ಬಗ್ಗೆ ಸಂಸ್ಥೆಯಿಂದ ಇನ್ನೂ ಹೆಚ್ಚಿನ ವಿವರಗಳನ್ನು ಕೇಳಲಾಗಿದೆಯೆಂದು ಮಿರ್ಝಾ ತಿಳಿಸಿದರು. ಜಪಾನ್‌ನ ಕಂಪೆನಿಯೊಂದು ಕೂಡಾ ಇಂತಹದ್ದೇ ಕೊಡುಗೆಗಳನ್ನು ನೀಡಿದ್ದು ಅದರಿಂದಲೂ ವಿವರ ಕೋರಿರುವುದಾಗಿ ಅವರು ತಿಳಿಸಿದರು
ಪಾಕಿಸ್ತಾನದ ಶೇ.79ರಷ್ಟು ಪ್ರಕರಣಗಳು ಸ್ಥಳೀಯವಾಗಿ ಹರಡಿರುವಂತಹದ್ದಾಗಿವೆಯೆಂದು ಮಿರ್ಝಾ ಹೇಳಿದರು.