ಡಿಸೆಂಬರ್-ಜನವರಿಯಲ್ಲಿ ಇಂಡಿಯಾ ಓಪನ್ ಆತಿಥ್ಯಕ್ಕೆ ಬಿಎಐ ಸಜ್ಜು

Update: 2020-04-29 06:00 GMT

ಹೊಸದಿಲ್ಲಿ, ಎ.29: ಕೋವಿಡ್-19 ಪಿಡುಗು ಕಡಿಮೆಯಾಗಿ, ಸರಕಾರ ಅನುಮತಿ ನೀಡಿದರೆ ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ 4,00,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಇಂಡಿಯಾ ಓಪನ್ ಟೂರ್ನಿಯ ಆತಿಥ್ಯವಹಿಸಿಕೊಳ್ಳಲು ಸಜ್ಜಾಗಿದೆ.

ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್- 500 ಟೂರ್ನಮೆಂಟ್ ನಡೆಸುವ ಕುರಿತಂತೆ ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ(ಬಿಡಬ್ಲುಎಫ್)ಕಳೆದ ವಾರ ಬಿಎಐಗೆ ಪತ್ರ ಕಳುಹಿಸಿಕೊಟ್ಟಿತ್ತು. ಕೊರೋನ ವೈರಸ್‌ನಿಂದಾಗಿ ಇತರ ಟೋಕಿಯೊ ಒಲಿಂಪಿಕ್ಸ್ ಕ್ವಾಲಿಫೈಯರ್‌ಗಳ ಜೊತೆಗೆ ಇಂಡಿಯಾ ಓಪನ್ ಟೂರ್ನಿಯನ್ನು ರದ್ದುಪಡಿಸಲಾಗಿತ್ತು.

ತಾನು ಡಿಸೆಂಬರ್ ಅಥವಾ ಜನವರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಸಿದ್ಧವಿದ್ದು, ಸರಕಾರದ ಅನುಮತಿ ಬಾಕಿ ಇದೆ ಎಂದು ಬಿಡಬ್ಲುಎಫ್‌ಗೆ ನೀಡಿದ ಉತ್ತರದಲ್ಲಿ ಬಿಎಐ ತಿಳಿಸಿದೆ.

‘‘ಡಿಸೆಂಬರ್ ಅಥವಾ ಜನವರಿಯಲ್ಲಿ ಇಂಡಿಯಾ ಓಪನ್ ನಡೆಸಲು ಸಿದ್ಧವಿರುವುದಾಗಿ ನಾವು ಬಿಡಬ್ಲುಎಫ್‌ಗೆ ತಿಳಿಸಿದ್ದೇವೆ. ಆದರೆ, ಎಲ್ಲವೂ ಜಾಗತಿಕ ಆರೋಗ್ಯ ಬಿಕ್ಕಟ್ಟು ಹೇಗೆ ನಿಯಂತ್ರಣಕ್ಕೆ ಬರಲಿದೆ ಹಾಗೂ ಸರಕಾರ ಅನುಮತಿ ಪಡೆಯುವುದನ್ನು ಅವಲಂಬಿಸಿದೆ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಕೆ.ಸಿಂಘಾನಿಯ ಹೇಳಿದ್ದಾರೆ.

‘‘ನಾವು ಕಳೆದ ವಾರ ಬಿಡಬ್ಲುಎಫ್‌ನಿಂದ ಇ-ಮೇಲ್ ಸ್ವೀಕರಿಸಿದ್ದೆವು. ಸೆಪ್ಟಂಬರ್‌ನಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವೇ ಎಂದು ನಮ್ಮಲ್ಲಿ ಕೇಳಲಾಗಿತ್ತು. ಆದರೆ, ಅನಿಶ್ಚಿತತೆ ಮನೆ ಮಾಡಿರುವ ಹಿನ್ನೆಲೆಯಲ್ಲಿ ನಾವು ಡಿಸೆಂಬರ್ ಮೊದಲ ಆಯ್ಕೆ ಹಾಗೂ ಜನವರಿ ಎರಡನೇ ಆಯ್ಕೆಯಾಗಿರುವುದಾಗಿ ತಿಳಿಸಿದ್ದೇವೆ. ಇದು ಸಾಕಷ್ಟು ಅಂಶಗಳನ್ನು ಅವಲಂಬಿಸಿದೆ. ಇದೀಗ ಅಂತರ್‌ರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಏನಾಗುತ್ತದೋ ನೋಡಬೇಕು’’ ಎಂದು ಪಿಟಿಐ ಸುದ್ಧಿಸಂಸ್ಥೆಗೆ ಸಿಂಘಾನಿಯ ಹೇಳಿದ್ದಾರೆ.

ಇಂಡಿಯಾ ಓಪನ್ ಸೂಪರ್-500 ಸ್ಪರ್ಧೆಯು ಹೊಸದಿಲ್ಲಿಯಲ್ಲಿ ಮಾರ್ಚ್ 24ರಿಂದ 29ರ ತನಕ ನಿಗದಿಯಾಗಿತ್ತು. ಒಲಿಂಪಿಕ್ಸ್ ಅರ್ಹತೆಯ ಅಂತಿಮ ಗಡುವಾಗಿರುವ ಎಪ್ರಿಲ್ 28ರ ಒಳಗೆ ನಿಗದಿಯಾಗಿರುವ ಸ್ವಿಸ್ ಓಪನ್ ಸೂಪರ್-300(ಮಾ.17-22), ಮಲೇಶ್ಯ ಓಪನ್ ಸೂಪರ್ 750(ಮಾ.31-ಎ.5), ಸಿಂಗಾಪುರ ಓಪನ್ ಸೂಪರ್- 500(ಮಾ.7-12) ಹಾಗೂ ಬ್ಯಾಡ್ಮಿಂಟನ್ ಏಶ್ಯ ಚಾಂಪಿಯನ್‌ಶಿಪ್(ಎ.21-26)ಸಹಿತ ಇತರ ಎಲ್ಲ ಟೂರ್ನಿಗಳು ರದ್ದಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News