ಸರವಣ ಕೊರೋನಗಿಂತ ಕ್ರೂರಿ: ಮಾಜಿ ಸಹ ಆಟಗಾರನ ವಿರುದ್ಧ ಗೇಲ್ ಆಕ್ರೋಶ

Update: 2020-04-29 06:02 GMT

ಜಮೈಕಾ, ಎ.28: ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಜಮೈಕಾ ತಲ್ಲಾವಾಸ್‌ನಿಂದ ತಾನು ನಿರ್ಗಮಿಸಲು ಮಾಜಿ ಸಹ ಆಟಗಾರ ರಾಮನರೇಶ್ ಸರವಣ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿರುವ ವೆಸ್ಟ್‌ಇಂಡೀಸ್‌ನ ಸ್ಫೋಟಕ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅವರು ಸರವಣ ಕೊರೋನ ವೈರಸ್‌ಗಿಂತಲೂ ಕ್ರೂರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೈಂಟ್ ಲೂಸಿಯಾ ತಂಡವನ್ನು ಸೇರಿಕೊಂಡಿರುವ ಬಿಗ್ ಹಿಟ್ಟರ್ ಗೇಲ್ 2020ರ ಸಿಪಿಎಲ್‌ನಲ್ಲಿ ಜಮೈಕಾ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದರು. ಗೇಲ್ ಮೊದಲ ನಾಲ್ಕು ಸಿಪಿಎಲ್ ಋತುವಿನಲ್ಲಿ ಜಮೈಕಾದ ಪರ ಆಡಿದ್ದರು.

‘‘ಮಾಜಿ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಸರವಣ ಫ್ರಾಂಚೈಸಿಯ ಮೇಲೆ ಹಿಡಿತ ಸಾಧಿಸಲು ಬಯಸಿದ್ದು, ನನ್ನ ನಿರ್ಗಮನದ ಹಿಂದೆ ಸರವಣ ಇದ್ದಾರೆ. ಸರವಣ ಕೊರೋನ ವೈರಸ್‌ಗಿಂತಲೂ ಕೆಟ್ಟವನು’’ ಎಂದು ಯೂ ಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಿರುವ ವೀಡಿಯೊದಲ್ಲಿ ಗೇಲ್ ಆರೋಪಿಸಿದ್ದಾರೆ.

 ಜಮೈಕಾ ತಲ್ಲಾವಾಸ್‌ನ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸರವಣ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರಿಸಿರುವ ಗೇಲ್, ‘‘ಸರವಣ, ನೀವು ಒಂದು ಹಾವಿದ್ದಂತೆ. ನೀವೊಬ್ಬ ಹೃದಯಹೀನ. ನೀವು ಅಪ್ರಬುದ್ಧ. ಜನರಿಗೆ ಬೆನ್ನಿಗೆ ಚೂರಿ ಹಾಕುವ ಬುದ್ಧಿ ನಿಮಗಿದೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News