ಕೋವಿಡ್-19ಗೆ ರೆಮ್‌ಡೆಸಿವಿರ್ ಸಂಭಾವ್ಯ ಔಷಧಿ?

Update: 2020-04-30 17:31 GMT

ನ್ಯೂಯಾರ್ಕ್, ಎ. 30: ಔಷಧ ತಯಾರಿಕಾ ಕಂಪೆನಿ ಗಿಲಿಯಡ್ ಸಯನ್ಸ್ ಇಂಕ್‌ನ ಪ್ರಾಯೋಗಿಕ ಔಷಧ ರೆಮ್‌ಡೆಸಿವಿರ್‌ನ ನೂತನ ವೈದ್ಯಕೀಯ ಪರೀಕ್ಷಾ ಅಂಕಿ-ಅಂಶಗಳು, ಈ ಔಷಧವು ಕೋವಿಡ್-19ಗೆ ಸಮರ್ಥ ಔಷಧವಾಗಬಹುದೆಂಬ ಭರವಸೆಯನ್ನು ಮೂಡಿಸಿವೆ.

ನೂತನ- ಕೊರೋನ ವೈರಸ್ ಸಾಂಕ್ರಾಮಿಕವು ಈವರೆಗೆ ಜಗತ್ತಿನಾದ್ಯಂತ 2.25 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ ಹಾಗೂ 30 ಲಕ್ಷಕ್ಕೂ ಅಧಿಕ ಮಂದಿ ಅದರ ಸೋಂಕಿಗೆ ಒಳಗಾಗಿದ್ದಾರೆ.

ಔಷಧದ ಮೂರು ಪ್ರತ್ಯೇಕ ಪ್ರಯೋಗಗಳ ಅಂಕಿ-ಅಂಶಗಳನ್ನು ಕಂಪೆನಿಯು ಬುಧವಾರ ಬಿಡುಗಡೆಗೊಳಿಸಿದ್ದು, ಫಲಿತಾಂಶವು ಭರವಸೆ ಮತ್ತು ಗೊಂದಲಗಳೆರಡನ್ನೂ ಸೃಷ್ಟಿಸಿದೆ.

ಈ ಔಷಧವು ಪರಿಣಾಮಕಾರಿ ಎಂಬುದಾಗಿ ಸಾಬೀತಾದರೆ, ಯಾವ ವರ್ಗದ ಕೊರೋನ ರೋಗಿಗಳು ಇದರ ಪ್ರಯೋಜನ ಪಡೆಯುತ್ತಾರೆ ಹಾಗೂ ಯಾವ ಸನ್ನಿವೇಶದಲ್ಲಿ ಅದನ್ನು ಕೊಡಬೇಕು ಹಾಗೂ ಸಾವಿನ ದರದ ಮೇಲೆ ಅದು ಏನಾದರೂ ಪರಿಣಾಮ ಬೀರುವುದೇ ಎಂಬ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮತ್ತು ಹೆಚ್ಚಿನ ಅಧ್ಯಯನಗಳು ಆಗಬೇಕಾಗಿವೆ.

ಕೊರೋನ ವೈರಸ್ ಸೋಂಕಿಗೆ ಒಳಗಾಗಿ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳ ಮೇಲೆ ರೆಮ್‌ಡೆಸಿವಿರ್ ಔಷಧವನ್ನು ಪ್ರಯೋಗಿಸಲಾಯಿತು. ಈ ಔಷಧವನ್ನು ಸೇವಿಸಿದ ರೋಗಿಗಳು ಪ್ಲೇಸ್‌ಬೊ ಎಂಬ ಔಷಧಿ ಸೇವಿಸಿದ ರೋಗಿಗಳಿಗಿಂತ 31 ಶೇಕಡದಷ್ಟು ಕ್ಷಿಪ್ರವಾಗಿ ಗುಣಹೊಂದಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಸಂಸ್ಥೆ (ಎನ್‌ಐಎಐಡಿ) ಬಿಡುಗಡೆ ಮಾಡಿದ ಪ್ರಾಥಮಿಕ ಫಲಿತಾಂಶ ತಿಳಿಸಿದೆ.

ಈ ಔಷಧವನ್ನು 1,063 ರೋಗಿಗಳ ಮೇಲೆ ಪ್ರಯೋಗಿಸಲಾಯಿತು. ಅವರ ಪೈಕಿ ಅರ್ಧದಷ್ಟು ಮಂದಿ 11 ದಿನಗಳಲ್ಲಿ ಚೇತರಿಕೆ ಕಂಡರು. ಪ್ಲೇಸ್‌ಬೊ ಔಷಧಿ ಸೇವಿಸಿದವರ ಚೇತರಿಕೆಯ ಅವಧಿ 15 ದಿನಗಳಾಗಿದ್ದವು.

ಈ ಫಲಿತಾಂಶದ ಬೆನ್ನಿಗೇ, ಶುಕ್ರವಾರ ಬೆಳಗ್ಗೆ ಗಿಲಿಯಡ್ ಸಯನ್ಸನ್ ಇಂಕ್‌ನ ಶೇರುಗಳ ಮೌಲ್ಯ ಹೆಚ್ಚಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News