ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಕಳೆದುಕೊಂಡ ಭಾರತ

Update: 2020-05-01 10:32 GMT

ದುಬೈ, ಮೇ 1: ಭಾರತ ಕ್ರಿಕೆಟ್ ತಂಡ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ತನ್ನ ಅಗ್ರ ಸ್ಥಾನವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಟ್ಟಿದೆ. ನಿಯಮದ ಪ್ರಕಾರ 2016-17ರಲ್ಲಿ ಭಾರತದ ಅಮೋಘ ಪ್ರದರ್ಶನದ ದಾಖಲೆಯನ್ನು ವಾರ್ಷಿಕ ಅಪ್‌ಡೇಟ್‌ನಿಂದ ಕೈಬಿಟ್ಟಿರುವ ಕಾರಣ ಮೂರನೇ ಸ್ಥಾನಕ್ಕೆ ಕುಸಿದಿದೆ.

ಭಾರತ 2016ರ ಬಳಿಕ ಮೊದಲ ಬಾರಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಆದರೆ, ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.

 ಹೊಸ ಪಟ್ಟಿಯಿಂದ 2016-17ರಲ್ಲಿ ಭಾರತದ 12 ಗೆಲುವು ಹಾಗೂ ಒಂದು ಸೋಲಿನ ದಾಖಲೆಯನ್ನು ಕೈಬಿಟ್ಟಿರುವ ಕಾರಣ ಭಾರತ ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

 2016-17ರಲ್ಲಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ವಿರುದ್ಧ ಸೇರಿದಂತೆ ಎಲ್ಲ ಐದು ಸರಣಿಗಳನ್ನು ಕೊಹ್ಲಿ ಬಳಗ ಗೆದ್ದುಕೊಂಡಿತ್ತು. ಅದೇ ಅವಧಿಯಲ್ಲಿ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ಹಾಗೂ ಭಾರತ ವಿರುದ್ಧ ಸೋತಿತ್ತು.

 ಈಗಿನ ಅಪ್‌ಡೇಟ್‌ನಲ್ಲಿ 2019ರ ಮೇನಿಂದ ಆಡಿರುವ ಎಲ್ಲ ಪಂದ್ಯಗಳಿಗೆ ಶೇ.100 ಹಾಗೂ ಕಳೆದೆರಡು ವರ್ಷಗಳ ಪಂದ್ಯಗಳಿಗೆ ಶೇ.50 ರೇಟ್ ನೀಡಲಾಗಿದೆ.

 ಆಸ್ಟ್ರೇಲಿಯ ತಂಡ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಮಾತ್ರವಲ್ಲ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ ನಂ.1 ಸ್ಥಾನಕ್ಕೇರಿದೆ. ಏಕದಿನ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News