ಗಡಿಯಲ್ಲಿ ಉತ್ತರ, ದಕ್ಷಿಣ ಕೊರಿಯಗಳಿಂದ ಗುಂಡಿನ ವಿನಿಮಯ

Update: 2020-05-03 17:30 GMT

ಸಿಯೋಲ್ (ದಕ್ಷಿಣ ಕೊರಿಯ), ಮೇ 3: ಎರಡು ಕೊರಿಯಗಳನ್ನು ಬೇರ್ಪಡಿಸುವ ಸೇನಾಮುಕ್ತ ವಲಯದಲ್ಲಿ ರವಿವಾರ ಉತ್ತರ ಕೊರಿಯವು ದಕ್ಷಿಣ ಕೊರಿಯದತ್ತ ಹಲವು ಸುತ್ತು ಗುಂಡು ಹಾರಿಸಿದೆ ಹಾಗೂ ಇದಕ್ಕೆ ಪ್ರತಿಯಾಗಿ ದಕ್ಷಿಣ ಕೊರಿಯವೂ ಉತ್ತರ ಕೊರಿಯದತ್ತ ಗುಂಡು ಹಾರಿಸಿದೆ ಎಂದು ದಕ್ಷಿಣ ಕೊರಿಯ ಹೇಳಿದೆ.

ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್-ಉನ್ ಮೂರು ವಾರಗಳ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ಉತ್ತರ ಕೊರಿಯದ ಸರಕಾರಿ ಮಾಧ್ಯಮ ವರದಿ ಮಾಡಿದ ಒಂದು ದಿನದ ಬಳಿಕ ಈ ಅಪರೂಪದ ಗುಂಡಿನ ವಿನಿಮಯ ನಡೆದಿದೆ.

ಉತ್ತರ ಕೊರಿಯ ನಡೆಸಿದ ಗುಂಡಿನ ದಾಳಿಯಲ್ಲಿ ದಕ್ಷಿಣ ಕೊರಿಯದ ಕಾವಲು ಗೋಪುರಕ್ಕೆ ಹಾನಿಯಾಗಿದೆ ಎಂದು ಸಿಯೋಲ್‌ನಲ್ಲಿರುವ ಸೇನಾ ಪಡೆಗಳ ಜಂಟಿ ಮುಖ್ಯಸ್ಥರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ದಕ್ಷಿಣದ ಭಾಗದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಉತ್ತರ ಕೊರಿಯ ನಡೆಸಿದ ಗುಂಡಿನ ದಾಳಿಯು ಉದ್ದೇಶಪೂರ್ವಕವಲ್ಲ ಎಂಬುದಾಗಿ ಪರಿಗಣಿಸಲಾಗಿದೆ ಎಂದು ಬಳಿಕ ದಕ್ಷಿಣ ಕೊರಿಯ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News