ಅಮೆರಿಕದ 24 ಆರೋಪಗಳಿಗೆ ಚೀನಾ ಸುದೀರ್ಘ ವಿವರಣೆ
ಬೀಜಿಂಗ್, ಮೇ 11: ಕೊರೋನ ವೈರಸ್ ಸಾಂಕ್ರಾಮಿಕವನ್ನು ತಾನು ನಿಭಾಯಿಸಿದ ರೀತಿಯ ಬಗ್ಗೆ ಅಮೆರಿಕದ ಹಿರಿಯ ರಾಜಕಾರಣಿಗಳು ಮಾಡಿರುವ 24 ಆರೋಪಗಳಿಗೆ ಚೀನಾ ಸುದೀರ್ಘ ವಿವರಣೆಗಳನ್ನು ಹೊರಡಿಸಿದೆ.
ಚೀನಾದ ವಿದೇಶ ಸಚಿವಾಲಯವು ಕಳೆದ ವಾರದ ತನ್ನ ಪತ್ರಿಕಾಗೋಷ್ಠಿಗಳ ಹೆಚ್ಚಿನ ಭಾಗವನ್ನು ಅಮೆರಿಕದ ರಾಜಕಾರಣಿಗಳು, ಅದರಲ್ಲೂ ಮುಖ್ಯವಾಗಿ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಾಡಿರುವ ಆರೋಪಗಳನ್ನು ತಿರಸ್ಕರಿಸಲು ಬಳಸಿಕೊಂಡಿತ್ತು.
ಕೊರೋನ ವೈರಸ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಚೀನಾ ಆರಂಭದಲ್ಲಿ ತಡೆಹಿಡಿದಿತ್ತು ಹಾಗೂ ವೈರಸ್ ವುಹಾನ್ ನಗರದ ಪ್ರಯೋಗಾಲಯವೊಂದರಲ್ಲಿ ಸೃಷ್ಟಿಯಾಗಿತ್ತು ಎಂಬ ಆರೋಪವನ್ನು ಪಾಂಪಿಯೊ ಪದೇ ಪದೇ ಮಾಡಿದ್ದರು.
ಅಮೆರಿಕದ ಆರೋಪಗಳನ್ನು ಚೀನಾದ ವಿದೇಶ ಸಚಿವಾಲಯವು 30 ಪುಟಗಳ ಲೇಖನವೊಂದರಲ್ಲಿ ತಿರಸ್ಕರಿಸಿದೆ ಹಾಗೂ ಅವುಗಳಿಗೆ ವಿವರಣೆಗಳನ್ನು ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ನೀಡಲಾಗಿದ್ದ ವಿವರಣೆಗಳನ್ನು ಈ ಲೇಖನದಲ್ಲಿ ಪುನರಾವರ್ತಿಸಲಾಗಿದೆ ಹಾಗೂ ಹೆಚ್ಚಿನ ವಿವರಣೆಗಳನ್ನು ಸೇರಿಸಲಾಗಿದೆ. ಈ ಲೇಖನವನ್ನು ಅದು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ.
ಲೇಖನದ ಆರಂಭದಲ್ಲಿ ಅದು ಅಮೆರಿಕದ 19ನೇ ಶತಮಾನದ ಅಧ್ಯಕ್ಷ ಅಬ್ರಹಾಂ ಲಿಂಕನ್‌ರ ಹೇಳಿಕೆಯೊಂದನ್ನು ಉಲ್ಲೇಖಿಸಿದೆ. ಲಿಂಕನ್ ಹೇಳಿರುವಂತೆ, ನೀವು ಕೆಲವು ಜನರನ್ನು ಯಾವಾಗಲೂ ಮೂರ್ಖರನ್ನಾಗಿಸಬಹುದು ಹಾಗೂ ಎಲ್ಲಾ ಜನರನ್ನು ಕೆಲವು ಸಲ
ಮೂರ್ಖರಾಗಿಸಬಹುದು. ಆದರೆ, ನೀವು ಎಲ್ಲಾ ಜನರನ್ನು ಯಾವಾಗಲೂ ಮೂರ್ಖರಾಗಿಸಲು ಸಾಧ್ಯವಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ.