ಕೊರೋನದಿಂದಾಗಿ ಬೃಹತ್ ಮಾನಸಿಕ ಆರೋಗ್ಯ ಬಿಕ್ಕಟ್ಟು ಸೃಷ್ಟಿ: ವಿಶ್ವಸಂಸ್ಥೆ ಎಚ್ಚರಿಕೆ
Update: 2020-05-14 23:08 IST
ಜಿನೀವ, ಮೇ 14: ಕೊರೋನ ವೈರಸ್‌ನಿಂದಾಗಿ ಜಾಗತಿಕ ಮಾನಸಿಕ ಆರೋಗ್ಯ ಬಿಕ್ಕಟ್ಟೊಂದು ಸೃಷ್ಟಿಯಾಗುವ ಅಪಾಯವಿದೆ ಎಂದು ವಿಶ್ವಸಂಸ್ಥೆ ಗುರುವಾರ ಎಚ್ಚರಿಸಿದೆ ಹಾಗೂ ಸಾಂಕ್ರಾಮಿಕವು ಒಡ್ಡಿರುವ ಮಾನಸಿಕ ಒತ್ತಡವನ್ನು ನಿಭಾಯಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಅದು ಹೇಳಿದೆ.
ಸಾಂಕ್ರಾಮಿಕದ ಆರಂಭಿಕ ತಿಂಗಳುಗಳಲ್ಲಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರಮುಖ ಸವಾಲಾಗಿದ್ದರೆ, ಸಾಂಕ್ರಾಮಿಕವು ಜಾಗತಿಕ ಜನಸಂಖ್ಯೆಯ ದೊಡ್ಡ ಭಾಗವನ್ನು ಪ್ರತಿನಿಧಿಸುವ ಜನರ ಮೇಲೆ ಭಾರೀ ಮಾನಸಿಕ ಒತ್ತಡವನ್ನೂ ಸೃಷ್ಟಿಸಿದೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ವೀಡಿಯೊ ಸಂದೇಶವೊಂದರಲ್ಲಿ ಎಚ್ಚರಿಸಿದ್ದಾರೆ.
ದಶಕಗಳ ನಿರ್ಲಕ್ಷ್ಯ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿನ ಕಡಿಮೆ ಹೂಡಿಕೆಯ ಬಳಿಕ, ಕೋವಿಡ್-19 ಸಾಂಕ್ರಾಮಿಕವು ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಹೆಚ್ಚುವರಿ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.