ಸೌದಿ ಅರೇಬಿಯಕ್ಕೆ ಕ್ಷಿಪಣಿಗಳನ್ನು ಪೂರೈಸುವ ಗುತ್ತಿಗೆ ಬೋಯಿಂಗ್ ಕಂಪೆನಿಗೆ

Update: 2020-05-14 17:46 GMT

ವಾಶಿಂಗ್ಟನ್, ಮೇ 14: ಸೌದಿ ಅರೇಬಿಯಕ್ಕೆ 1,000ಕ್ಕೂ ಅಧಿಕ ಆಕಾಶದಿಂದ ನೆಲಕ್ಕೆ ಹಾರುವ ಮತ್ತು ನೌಕೆ-ವಿನಾಶಕ ಕ್ಷಿಪಣಿಗಳನ್ನು ಪೂರೈಸುವ ಎರಡು ಗುತ್ತಿಗೆಗಳನ್ನು ಬೋಯಿಂಗ್ ಕಂಪೆನಿ ಪಡೆದುಕೊಂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಬುಧವಾರ ತಿಳಿಸಿದೆ. ಈ ಎರಡು ಗುತ್ತಿಗೆಗಳ ಮೌಲ್ಯ 2.5 ಬಿಲಿಯ ಡಾಲರ್ (ಸುಮಾರು 18,890 ಕೋಟಿ ರೂಪಾಯಿ)ಗೂ ಅಧಿಕವಾಗಿದೆ.

1.97 ಬಿಲಿಯ ಡಾಲರ್ (14,886 ಕೋಟಿ ರೂಪಾಯಿ) ಮೌಲ್ಯದ ಮೊದಲ ಗುತ್ತಿಗೆಯು ಸೌದಿ ಅರೇಬಿಯದ ಸ್ಲ್ಯಾಮರ್ ಕ್ರೂಸ್ ಕ್ಷಿಪಣಿಗಳ ಆಧುನೀಕರಣ ಹಾಗೂ ಈ ಮಾದರಿಯ 650 ನೂತನ ಕ್ಷಿಪಣಿಗಳನ್ನು ಆ ದೇಶಕ್ಕೆ ಪೂರೈಸುವುದಕ್ಕೆ ಸಂಬಂಧಿಸಿದ್ದಾಗಿದೆ.

467 ನೂತನ ಹಾರ್ಪೂನ್ ಬ್ಲಾಕ್ ಹಡಗು ನಿಗ್ರಹ ಕ್ಷಿಪಣಿಗಳನ್ನು ನಿರ್ಮಿಸುವ 650 ಮಿಲಿಯ ಡಾಲರ್ (ಸುಮಾರು 4,911 ಕೋಟಿ ರೂಪಾಯಿ) ಗುತ್ತಿಗೆಯನ್ನೂ ಕಂಪೆನಿ ವಹಿಸಿಕೊಂಡಿದೆ. ಈ ಪೈಕಿ 400ಕ್ಕೂ ಅಧಿಕ ಕ್ಷಿಪಣಿಗಳನ್ನು ಸೌದಿ ಅರೇಬಿಯಕ್ಕೆ ಪೂರೈಸಲಾಗುವುದು. ಇತರ ಕ್ಷಿಪಣಿಗಳನ್ನು ಬ್ರೆಝಿಲ್, ಖತರ್, ಮತ್ತು ಥಾಯ್ಲೆಂಡ್‌ಗಳಿಗ ಪೂರೈಸಲಾಗುವುದು. ಪೂರಕ ಸಲಕರಣೆಗಳನ್ನು ಭಾರತ, ಜಪಾನ್, ನೆದರ್‌ಲ್ಯಾಂಡ್ಸ್ ಮತ್ತು ದಕ್ಷಿಣ ಕೊರಿಯಗಳಿಗೆ ಒದಗಿಸಲಾಗುವುದು ಎಂದು ಹೇಳಿಕೆಯೊಂದರಲ್ಲಿ ಪೆಂಟಗನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News