ಇಟಲಿ: ಜೂನ್ 3ರಿಂದ ವಿದೇಶ ವಿಮಾನಯಾನ ಆರಂಭ
Update: 2020-05-16 20:37 IST
ರೋಮ್ (ಇಟಲಿ), ಮೇ 16: ಜೂನ್ 3ರಿಂದ ವಿದೇಶಗಳಿಗೆ ಹೋಗುವ ಮತ್ತು ವಿದೇಶಗಳಿಂದ ಒಳಬರುವ ವಿಮಾನಯಾನಕ್ಕೆ ಅವಕಾಶ ನೀಡುವ ಪ್ರಸ್ತಾವಕ್ಕೆ ಇಟಲಿ ಸರಕಾರ ಶನಿವಾರ ಅಂಗೀಕಾರ ನೀಡಿದೆ. ಈ ಮೂಲಕ ಜಗತ್ತಿನ ಅತಿ ಕಠಿಣ ಕೊರೋನ ವೈರಸ್ ಬೀಗಮುದ್ರೆಯಿಂದ ಹೊರಬರಲು ಇಟಲಿ ಯೋಜನೆಗಳನ್ನು ರೂಪಿಸಿದೆ.
ಅದೇ ದಿನದಿಂದ ದೇಶಾದ್ಯಂತ ಮುಕ್ತ ಪ್ರಯಾಣಕ್ಕೂ ಸರಕಾರ ಅನುಮತಿ ನೀಡಲಿದೆ. ತಕ್ಷಣ ಬೀಗಮುದ್ರೆಯನ್ನು ತೆರವುಗೊಳಿಸುವಂತೆ ಕೆಲವು ರಾಜ್ಯಗಳು ಬಯಸಿದ್ದರೂ, ಹಂತಹಂತವಾಗಿ ತೆರವುಗೊಳಿಸಲು ಪ್ರಧಾನಿ ಗಿಯುಸೆಪ್ ಕಾಂಟೆ ನಿರ್ಧರಿಸಿದ್ದಾರೆ.
ಇಟಲಿಯಲ್ಲಿ ಈವರೆಗೆ 31,600ಕ್ಕೂ ಹೆಚ್ಚು ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ. ಅಮೆರಿಕ ಮತ್ತು ಬ್ರಿಟನ್‌ಗಳ ಬಳಿಕ, ಸಾವಿನ ಸಂಖ್ಯೆಯಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ.