ವಿಶ್ವಸಂಸ್ಥೆಗೆ ನೀಡಬೇಕಾದ ದೇಣಿಗೆ ಪಾವತಿಸಿ: ಅಮೆರಿಕಕ್ಕೆ ಚೀನಾ ಕರೆ

Update: 2020-05-16 15:10 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಮೇ 16: ವಿಶ್ವಸಂಸ್ಥೆಗೆ ದೇಣಿಗೆ ನೀಡುವ ತಮ್ಮ ಬದ್ಧತೆಗಳನ್ನು ಸದಸ್ಯ ರಾಷ್ಟ್ರಗಳು ಈಡೇರಿಸಬೇಕು ಎಂಬುದಾಗಿ ಕರೆನೀಡುವ ಹೇಳಿಕೆಯೊಂದನ್ನು ಚೀನಾ ಶುಕ್ರವಾರ ಹೊರಡಿಸಿದೆ. ಅದೇ ವೇಳೆ, ಅಮೆರಿಕವು ವಿಶ್ವಸಂಸ್ಥೆಗೆ ಎರಡು ಬಿಲಿಯ ಡಾಲರ್ (ಸುಮಾರು 15,175 ಕೋಟಿ ರೂಪಾಯಿ) ಮೊತ್ತವನ್ನು ಬಾಕಿಯಿರಿಸಿದೆ ಎಂಬುದಾಗಿಯೂ ಅದು ಹೇಳಿದೆ.

ಮೇ 14ರ ವೇಳೆಗೆ, ವಿಶ್ವಸಂಸ್ಥೆಯ ಸಾಮಾನ್ಯ ಬಜೆಟ್ ಮತ್ತು ಶಾಂತಿಪಾಲನಾ ಬಜೆಟ್‌ಗೆ ಸದಸ್ಯ ದೇಶಗಳಿಂದ ಬರಬೇಕಾಗಿರುವ ಬಾಕಿ ಮೊತ್ತವು ಕ್ರಮವಾಗಿ 1.63 ಬಿಲಿಯ ಡಾಲರ್ (ಸುಮಾರು 12,370 ಕೋಟಿ ರೂಪಾಯಿ) ಮತ್ತು 2.14 ಬಿಲಿಯ ಡಾಲರ್ (ಸುಮಾರು 16,240 ಕೋಟಿ ರೂಪಾಯಿ) ಆಗಿದೆ ಎಂದು ಚೀನಾದ ಹೇಳಿಕೆ ತಿಳಿಸಿದೆ.

ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯ ಕಚೇರಿ ಬಿಡುಗಡೆ ಮಾಡಿದ ವರದಿ ಮತು ಗುರುವಾರ ನಡೆದ ವಿಶ್ವಸಂಸ್ಥೆಯ ಸಭೆಯೊಂದರ ನಿರ್ಣಯಗಳ ಆಧಾರದಲ್ಲಿ ಚೀನಾ ಈ ಹೇಳಿಕೆ ಬಿಡುಗಡೆ ಮಾಡಿದೆ.

 ಹಲವಾರು ವರ್ಷಗಳ ಬಾಕಿ ಇಟ್ಟಿರುವ ಅಮೆರಿಕವು ಅತಿ ಹೆಚ್ಚಿನ ಬಾಕಿದರ ದೇಶವಾಗಿದೆ . ಅದು ಕ್ರಮವಗಿ 1.165 ಬಿಲಿಯ ಡಾಲರ್ (ಸುಮಾರು 8,840 ಕೋಟಿ ರೂಪಾಯಿ) ಮತ್ತು 1.332 ಬಿಲಿಯ ಡಾಲರ್ (ಸುಮಾರು 10,107 ಕೋಟಿ ರೂಪಾಯಿ) ಬಾಕಿಗಳನ್ನು ಪಾವತಿಸಬೇಕಾಗಿದೆ ಎಂದು ಚೀನಾ ಹೇಳಿದೆ.

ಅಮೆರಿಕವು ವಿಶ್ವಸಂಸ್ಥೆಯ ದೊಡ್ಡ ದೇಣಿಗೆದಾರ ದೇಶವಾಗಿದೆ. ಅದು ವಿಶ್ವಸಂಸ್ಥೆಯ ನಿರ್ವಹಣಾ ವೆಚ್ಚದ ಸುಮಾರು 22 ಶೇಕಡದಷ್ಟನ್ನು ಹಾಗೂ ಶಾಂತಿಪಾಲನಾ ಕಾರ್ಯಾಚರಣೆಗಳ ಸುಮಾರು 25 ಶೇಕಡದಷ್ಟನ್ನು ಪಾವತಿಸುತ್ತದೆ. ವಿಶ್ವಸಂಸ್ಥೆಯ ನಿರ್ವಹಣಾ ವೆಚ್ಚವು ಸುಮಾರು 3 ಬಿಲಿಯ ಡಾಲರ್ (ಸುಮಾರು 22,763 ಕೋಟಿ ರೂಪಾಯಿ)ನಷ್ಟಾದರೆ, ಶಾಂತಿಪಾಲನಾ ಕಾರ್ಯಾಚರಣೆಗಳ ವೆಚ್ಚವು ವರ್ಷಕ್ಕೆ 6 ಬಿಲಿಯ ಡಾಲರ್ (45,526 ಕೋಟಿ ರೂಪಾಯಿ)ನಷ್ಟಾಗುತ್ತದೆ.

ಚೀನಾದಿಂದ ಗಮನ ಬೇರೆಡೆಗೆ ಸೆಳೆಯುವ ತಂತ್ರ: ಅಮೆರಿಕ

ವಿಶ್ವಸಂಸ್ಥೆಯ ಬಾಕಿಯನ್ನು ಪಾವತಿಸುವಂತೆ ಚೀನಾ ಮಾಡಿರುವ ಮನವಿಯನ್ನು ಅಮೆರಿಕ ತಳ್ಳಿಹಾಕಿದೆ. ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿನ ತನ್ನ ವೈಫಲ್ಯ ಮತ್ತು ಮುಚ್ಚಿಹಾಕಲು ತಾನು ನಡೆಸಿದ ಪ್ರಯತ್ನಗಳಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಚೀನಾ ಉತ್ಸುಕವಾಗಿದೆ. ಇದು ಅದರ ಇನ್ನೊಂದು ಉದಾಹರಣೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರ ಕಚೇರಿ ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಚಟುವಟಿಕೆಗಳಿಗೆ ಅಮೆರಿಕವು ಇತ್ತೀಚೆಗೆ 726 ಮಿಲಿಯ ಡಾಲರ್ (ಸುಮಾರು 5,500 ಕೋಟಿ ರೂಪಾಯಿ) ನೀಡಿದೆ ಹಾಗೂ ಎಂದಿನಂತೆ ತನ್ನೆಲ್ಲ ದೇಣಿಗೆಯನ್ನು ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಒಟ್ಟಾಗಿ ಪಾವತಿಸಲಿದೆ ಎಂದು ಅದು ಹೇಳಿದೆ.

ಡಬ್ಲ್ಯುಎಚ್‌ಒಗೆ ಆಂಶಿಕ ದೇಣಿಗೆ ನೀಡಲು ಅಮೆರಿಕ ನಿರ್ಧಾರ?

ವಿಶ್ವ ಆರೋಗ್ಯ ಸಂಸ್ಥೆಗೆ ನೀಡಬೇಕಾಗಿರುವ ದೇಣಿಗೆಯ ಒಂದು ಭಾಗವನ್ನು ನೀಡಲು ಅಮೆರಿಕ ಸರಕಾರ ನಿರ್ಧರಿಸಿದೆ ಎಂದು ಫಾಕ್ಸ್ ನ್ಯೂಸ್ ಶುಕ್ರವಾರ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ನೀಡುವಷ್ಟು ಪ್ರಮಾಣದ ದೇಣಿಗೆಯನ್ನು ನೀಡಲು ಅಮೆರಿಕದ ಟ್ರಂಪ್ ಆಡಳಿತವು ಒಪ್ಪಿಕೊಂಡಿದೆ ಎಂದು ಕರಡು ಪತ್ರವೊಂದನ್ನು ಉಲ್ಲೇಖಿಸಿ ಸುದ್ದಿ ಚಾನೆಲ್ ವರದಿ ಮಾಡಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಕೈಗೊಂಬೆಯಾಗಿದೆ ಹಾಗೂ ಅದು ಚೀನಾ ಪರವಾದ ಧೋರಣೆಯನ್ನು ಹೊಂದಿದೆ ಎಂದು ಆರೋಪಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡಬೇಕಾಗಿರುವ ದೇಣಿಗೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಪ್ರಿಲ್ 14ರಂದು ರದ್ದು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News