ಕೊರೋನಕ್ಕೆ ಲಸಿಕೆ: ಭಾರತೀಯರ ಪ್ರಯತ್ನ ಶ್ಲಾಘನೀಯ: ಟ್ರಂಪ್

Update: 2020-05-16 15:16 GMT

ವಾಶಿಂಗ್ಟನ್, ಮೇ 16: ಮಾರಕ ಕೊರೋನ ವೈರಸ್ ನಿಗ್ರಹಕ್ಕೆ ಔಷಧಿಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮಾಡುತ್ತಿರುವ ಪ್ರಯತ್ನಗಳಿಗಾಗಿ ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಸಿದ್ದಾರೆ.

ಈ ಸಾಂಕ್ರಾಮಿಕವನ್ನು ನಿಭಾಯಿಸಲು ಅಮೆರಿಕವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಅವರು ನುಡಿದರು.

ಅಮೆರಿಕದಲ್ಲಿ ಭಾರೀ ಸಂಖ್ಯೆಯ ಭಾರತೀಯರನ್ನು ನಾವು ಹೊಂದಿದ್ದೇವೆ. ಈ ಪೈಕಿ ಹೆಚ್ಚಿನವರು ಕೊರೋನ ವೈರಸ್ ವಿರುದ್ಧದ ಲಸಿಕೆ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಶ್ರೇಷ್ಠ ವಿಜ್ಞಾನಿಗಳು ಮತ್ತು ಸಂಶೋಧಕರು ಎಂದು ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಕೊರೋನ ವೈರಸ್ ವಿರುದ್ಧದ ತನ್ನ ಹೋರಾಟವನ್ನು ಶ್ಲಾಸಿದ ಭಾರತೀಯರಿಗೆ ಅವರು ಈ ರೀತಿಯಾಗಿ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಅಮೆರಿಕದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಜೈವಿಕ-ಔಷಧಿ ಸ್ಟಾರ್ಟಪ್‌ಗಳಲ್ಲಿ ಭಾರೀ ಸಂಖ್ಯೆಯ ಭಾರತೀಯ ವಿಜ್ಞಾನಿಗಳು ವೈದ್ಯಕೀಯ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಗಳಲ್ಲಿ ತೊಡಗಿದ್ದಾರೆ.

ಅಮೆರಿಕದಲ್ಲಿ ಸುಮಾರು 40 ಲಕ್ಷ ಭಾರತೀಯ ಅಮೆರಿಕನ್ನರಿದ್ದಾರೆ. ಈ ಪೈಕಿ ಸುಮಾರು 25 ಲಕ್ಷ ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಭಾವ್ಯ ಮತದಾರರಾಗಿದ್ದಾರೆ.

ಕೊರೋನ ವೈರಸ್‌ನಿಂದಾಗಿ ಅಮೆರಿಕದಲ್ಲಿ ಈವರೆಗೆ 87,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News