ಅಮೆಝಾನ್ ಅರಣ್ಯದಲ್ಲಿ ಕೊರೋನ ಆಸ್ಪತ್ರೆ ನಿರ್ಮಾಣ

Update: 2020-05-17 17:12 GMT
ಸಾಂದರ್ಭಿಕ ಚಿತ್ರ

ಲಿಮಾ (ಪೆರು), ಮೇ 17: ಬುಡಕಟ್ಟು ಜನರು ಭಾರೀ ಪ್ರಮಾಣದಲ್ಲಿ ನೂತನ-ಕೊರೊನ ವೈರಸ್ ಸಾಂಕ್ರಾಮಿಕದ ಸೋಂಕಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ, ಅಮೆಝಾನ್ ದಟ್ಟಾರಣ್ಯದಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸುವುದಾಗಿ ದಕ್ಷಿಣ ಅಮೆರಿಕ ಖಂಡದ ದೇಶ ಪೆರು ಹೇಳಿದೆ.

ಬ್ರೆಝಿಲ್ ದೇಶದ ಗಡಿಗೆ ಹೊಂದಿಕೊಂಡಿರುವ ದುರ್ಗಮ ಉಕಲ್ಯಾಲಿ ಪ್ರದೇಶದ ರಾಜಧಾನಿ ಪುಕಲ್ಪದಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು ಶೀಘ್ರವಾಗಿ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ದೇಶದ ಸಾಮಾಜಿಕ ಭದ್ರತಾ ಸಂಸ್ಥೆ ಎಸ್ಸಲೂಡ್ ತಿಳಿಸಿದೆ. ಆಸ್ಪತ್ರೆಯು ಮೂರು ವಾರಗಳಲ್ಲಿ ರೋಗಿಗಳ ಸೇವೆಗೆ ತೆರೆಯುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

ಪೆರುವಿನಲ್ಲಿರುವ ಅಮೆಝಾನ್ ಅರಣ್ಯ ಪ್ರದೇಶವು ಈಗಾಗಲೇ ಕೊರೋನ ವೈರಸ್ ರೋಗದ ಭೀಕರ ದಾಳಿಗೆ ಒಳಗಾಗಿದೆ. ಈ ವಲಯದ ಅತಿ ದೊಡ್ಡ ನಗರವಾಗಿರುವ ಇಕ್ವಿಟೊಸ್‌ನಲ್ಲಿರುವ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಂದ ತುಂಬಿತುಳುಕುತ್ತಿವೆ ಹಾಗೂ ಸ್ಥಳೀಯ ಶವಾಗಾರಗಳಿಗೆ ಪ್ರವಾಹೋಪಾದಿಯಲ್ಲಿ ಬರುತ್ತಿರುವ ಶವಗಳನ್ನು ನಿಭಾಯಿಸುವುದು ಅಸಾಧ್ಯವಾಗಿದೆ.

ಅಮೆಝಾನ್‌ಗೆ 220 ಆರೋಗ್ಯ ಕಾರ್ಯಕರ್ತರ ತಂಡವೊಂದನ್ನು ಕಳುಹಿಸುವುದಾಗಿ ಸರಕಾರ ಹೇಳಿದೆ.

ಪೆರುವಿನಲ್ಲಿರುವ ಅಮೆಝಾನ್ ಅರಣ್ಯದಲ್ಲಿ ರಸ್ತೆಗಳೇ ಇಲ್ಲ ಹಾಗೂ ನದಿಗಳು ಸಾರಿಗೆಯ ಪ್ರಮುಖ ನಮೂನೆಗಳಾಗಿವೆ. ಈ ವಲಯದ ಕೊರೋನ ವೈರಸ್ ರೋಗಿಗಳು ಕೃತಕ ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ ಪ್ರತಿ ದಿನ ಭಾರೀ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಲಯದಲ್ಲಿ 2,250ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಹಾಗೂ ಈ ಪೈಕಿ 95 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News