ಇಸ್ರೇಲ್‌ಗೆ ಚೀನಾ ರಾಯಭಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2020-05-17 17:42 GMT
ಸಾಂದರ್ಭಿಕ ಚಿತ್ರ

ಜೆರುಸಲೇಮ್, ಮೇ 17: ಇಸ್ರೇಲ್‌ಗೆ ಚೀನಾದ ರಾಯಭಾರಿ ಡು ವೇ, ಟೆಲ್ ಅವೀವ್‌ನ ಹೊರವಲಯದಲ್ಲಿರುವ ತನ್ನ ಮನೆಯಲ್ಲಿ ರವಿವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

57 ವರ್ಷದ ರಾಯಭಾರಿ ಟೆಲ್ ಅವೀವ್‌ನ ಉತ್ತರ ಭಾಗದಲ್ಲಿರುವ ಹರ್ಝ್‌ಲಿಯ ಎಂಬ ಪಟ್ಟಣದಲ್ಲಿರುವ ತನ್ನ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವಕ್ತಾರ ಮಿಕಿ ರೋಸನ್‌ಫೀಲ್ಡ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ನುಡಿದರು. ರಾಯಭಾರಿ ಫೆಬ್ರವರಿ ಮಧ್ಯ ಭಾಗದಲ್ಲಿ ಇಸ್ರೇಲ್‌ಗೆ ಆಗಮಿಸಿದ್ದರು. ಅವರ ಪತ್ನಿ ಮಗ ಇಸ್ರೇಲ್‌ನಲ್ಲಿ ಅವರೊಂದಿಗೆ ವಾಸಿಸುತ್ತಿರಲಿಲ್ಲ.

ಸರಿಯಾದ ಮಾಹಿತಿ ಸಿಕ್ಕ ಬಳಿಕವಷ್ಟೇ ಈ ಬಗ್ಗೆ ಹೇಳಿಕೆ ನೀಡುವುದಾಗಿ ಚೀನಾದ ವಿದೇಶ ಸಚಿವಾಲಯ ತಿಳಿಸಿದೆ. ಇದಕ್ಕೂ ಮೊದಲು ಯುಕ್ರೇನ್‌ಗೆ ಚೀನಾದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

ರಾಯಭಾರಿ ತನ್ನ ಹಾಸಿಗೆಯಲ್ಲಿ ಮೃತಪಟ್ಟಿರುವುದನ್ನು ಅವರ ಸಿಬ್ಬಂದಿ ನೋಡಿದ್ದಾರೆ ಹಾಗೂ ಸ್ಥಳದಲ್ಲಿ ಯಾವುದೇ ಹಿಂಸೆಯ ಕುರುಹು ಇರಲಿಲ್ಲ ಎಂಬುದಾಗಿ ಹಾರಿಟ್ಝ್ ಡೇಲಿ ಪತ್ರಿಕೆ ವರದಿ ಮಾಡಿದೆ.

ಅವರ ಸಾವಿಗೆ ಹೃದಯಾಘಾತ ಕಾರಣ ಎಂಬಂತೆ ಕಂಡುಬರುತ್ತಿದೆ ಎಂಬುದಾಗಿ ತುರ್ತು ಆರೋಗ್ಯ ಸೇವೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಡು ಇಸ್ರೇಲ್‌ಗೆ ಆಗಮಿಸಿದ ಬಳಿಕ, ಮನೆಯಲ್ಲೇ 14 ದಿನಗಳ ಕ್ವಾರಂಟೈನ್‌ನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News