ಮಾಸ್ಕ್ ಬಳಕೆಯಿಂದ ಕೊರೋನ ಸೋಂಕು ತಡೆ ಸಾಧ್ಯ

Update: 2020-05-18 16:38 GMT

ಹಾಂಕಾಂಗ್, ಮೇ 18: ವ್ಯಾಪಕವಾಗಿ ಮುಖಕವಚ ಬಳಸುವುದರಿಂದ ಮಾರಕ ಕೊರೋನ ವೈರಸ್ ಸೋಂಕು ಹರಡುವುದು ಕಡಿಮೆಯಾಗುತ್ತದೆ ಎನ್ನುವುದು ಹ್ಯಾಮ್‌ಸ್ಟರ್ (ಇಲಿ ಜಾತಿಗೆ ಸೇರಿದ ಒಂದು ಪ್ರಾಣಿ)ಗಳ ಮೇಲೆ ನಡೆಸಿರುವ ಪ್ರಯೋಗಗಳಿಂದ ತಿಳಿದುಬಂದಿದೆ ಎಂದು ಹಾಂಕಾಂಗ್‌ನ ಪರಿಣತರ ತಂಡವೊಂದು ರವಿವಾರ ತಿಳಿಸಿದೆ.

ರೋಗ ಲಕ್ಷಣಗಳನ್ನು ಹೊಂದಿರುವ ಹಾಗೂ ಹೊಂದಿರದ ಕೊರೋನ ವೈರಸ್ ಸೋಂಕು ಪೀಡಿತರು ಇತರರಿಗೆ ಸೋಂಕು ಹರಡುವುದನ್ನು ಮುಖಕವಚಗಳು ತಡೆಯಬಲ್ಲುದೇ ಎನ್ನುವುದನ್ನು ತಿಳಿಯಲು ಹಾಂಕಾಂಗ್ ವಿಶ್ವವಿದ್ಯಾನಿಲಯದ ಪರಿಣತರು ನಡೆಸಿರುವ ಸಂಶೋಧನೆ ಇದಾಗಿದೆ.

ಮಾಸ್ಕ್ ಧರಿಸುವುದರಿಂದ ಸಂಪರ್ಕ-ರಹಿತ ಸೋಂಕು ಹರಡುವಿಕೆಯನ್ನು 60 ಶೇಕಡಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತಡೆಯಬಹುದು ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಹಾಗೂ ಹಾಂಕಾಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಯುವೆನ್ ಕ್ವೊಕ್-ಯುಂಗ್ ಹೇಳಿದ್ದಾರೆ.

ಹಾಂಕಾಂಗ್ ಯಶಸ್ಸಿಗೆ ಸಾಮೂಹಿಕ ಮಾಸ್ಕ್ ಬಳಕೆಯೇ ಕಾರಣ?

75 ಲಕ್ಷ ಜನಸಂಖ್ಯೆಯ ಹಾಂಕಾಂಗ್‌ನಲ್ಲಿ ಜನರು ಸಾಮೂಹಿಕವಾಗಿ ಮುಖಕವಚ ಧರಿಸಿದ ಕಾರಣಕ್ಕಾಗಿಯೇ ಅಲ್ಲಿ ನೂತನ-ಕೊರೋನ ವೈರಸ್ ಅತ್ಯಂತ ವೇಗವಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಅಲ್ಲಿ ನಾಲ್ಕು ತಿಂಗಳ ಹಿಂದೆ ಮೊದಲ ಕೊರೋನ ವೈರಸ್ ಸೋಂಕು ಪತ್ತೆಯಾಗಿತ್ತು. ಈಗ ಅಲ್ಲಿನ ಸೋಂಕು ಪ್ರಕರಣಗಳ ಸಂಖ್ಯೆ ಕೇವಲ 1,000ಕ್ಕಿಂತ ಸ್ವಲ್ಪ ಹೆಚ್ಚು ಹಾಗೂ ನಾಲ್ಕು ಸಾವುಗಳು ಸಂಭವಿಸಿವೆ.

ವ್ಯಾಪಕವಾಗಿ ಮಾಸ್ಕ್ ಬಳಕೆ, ಪರಿಪೂರ್ಣ ತಪಾಸಣೆ, ಸೋಂಕು ಮೂಲ ಪತ್ತೆ ಹಾಗೂ ಸರಿಯಾದ ಚಿಕಿತ್ಸೆ ಈ ಬೆಳವಣಿಗೆಗೆ ಕಾರಣ ಎಂದು ಪರಿಣತರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News