ಅಫ್ಘಾನ್: ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಅಧ್ಯಕ್ಷ ಘನಿ, ಎದುರಾಳಿ ಸಹಿ
ಕಾಬೂಲ್ (ಅಫ್ಘಾನಿಸ್ತಾನ), ಮೇ 18: ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಎದುರಾಳಿ ಅಬ್ದುಲ್ಲಾ ಅಬ್ದುಲ್ಲಾ ಅಧಿಕಾರ ಹಂಚಿಕೆ ಒಪ್ಪಂದವೊಂದಕ್ಕೆ ರವಿವಾರ ಸಹಿ ಹಾಕಿದ್ದಾರೆ ಹಾಗೂ ಇದರೊಂದಿಗೆ ಹಲವು ತಿಂಗಳ ಅವಧಿಯ ರಾಜಕೀಯ ಬಿಕ್ಕಟ್ಟು ಕೊನೆಗೊಂಡಿದೆ ಘನಿಯ ವಕ್ತಾರರೊಬ್ಬರು ಹೇಳಿದ್ದಾರೆ.
ದೇಶದಲ್ಲಿ ಸುದೀರ್ಘ ಅವಧಿಯಿಂದ ನಡೆಯುತ್ತಿರುವ ಆಂತರಿಕ ಯುದ್ಧವನ್ನು ಶಮನಗೊಳಿಸಲು ಈ ಬೆಳವಣಿಗೆ ನೆರವಾಗಬಹುದು ಎಂಬ ಭರವಸೆಯನ್ನು ರಾಜಕೀಯ ವೀಕ್ಷಕರು ವ್ಯಕ್ತಪಡಿಸಿದ್ದಾರೆ.
ಅಬ್ದುಲ್ಲಾ ಸೆಪ್ಟಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರಸ್ಕರಿಸಿದ್ದರು ಹಾಗೂ ಈ ವರ್ಷದ ಆದಿ ಭಾಗದಲ್ಲಿ ಸಮಾನಾಂತರ ಸರಕಾರವೊಂದರ ರಚನೆಯನ್ನು ಘೋಷಿಸಿದ್ದರು.
‘‘ಇಂದು ನಮ್ಮ ಪ್ರೀತಿಯ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ದಿನ. ಸಮಾನ ಚಿಂತನೆಗಳೊಂದಿಗೆ ದೇಶದ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ತಾವು ಬದ್ಧರಾಗಿದ್ದೇವೆ ಎನ್ನುವುದನ್ನು ಅಫ್ಘನ್ನರು ಸಾಬೀತುಪಡಿಸಿದ್ದಾರೆ’ ಎಂದು ಸಹಿ ಹಾಕುವ ಸಮಾರಂಭದಲ್ಲಿ ಘನಿ ಹೇಳಿದರು.