ಫೆಲೆಸ್ತೀನ್ ನಿರಾಶ್ರಿತರಿಗಾಗಿ ಭಾರತದಿಂದ 15 ಕೋಟಿ ರೂ. ದೇಣಿಗೆ

Update: 2020-05-19 16:30 GMT

ರಮಲ್ಲಾ (ಪಶ್ಚಿಮ ದಂಡೆ), ಮೇ 19: ಫೆಲೆಸ್ತೀನ್ ನಿರಾಶ್ರಿತರ ಪರವಾಗಿ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾಮಗಾರಿ ಘಟಕಕ್ಕೆ ಭಾರತ 2 ಮಿಲಿಯ ಡಾಲರ್ (ಸುಮಾರು 15 ಕೋಟಿ ರೂಪಾಯಿ) ದೇಣಿಗೆ ನೀಡಿದೆ.

ವಿಶ್ವಸಂಸ್ಥೆಯ ಈ ಘಟಕಕ್ಕೆ ನೀಡುತ್ತಿರುವ ದೇಣಿಗೆಯನ್ನು 2016ಲ್ಲಿದ್ದ 1.25 ಮಿಲಿಯ ಡಾಲರ್ (ಸುಮಾರು 9.45 ಕೋಟಿ ರೂಪಾಯಿ)ನಿಂದ 2019ರಲ್ಲಿ 5 ಮಿಲಿಯ ಡಾಲರ್ (ಸುಮಾರು 37 ಕೋಟಿ ರೂಪಾಯಿ)ಗೆ ಭಾರತ ಹೆಚ್ಚಿಸಿದೆ. 2020ರಲ್ಲಿ ಇನ್ನೂ 5 ಮಿಲಿಯ ಡಾಲರ್ ನೀಡುವುದಾಗಿ ಅದು ವಾಗ್ದಾನ ನೀಡಿದೆ. ಇದು ಘಟಕದ ಸಲಹಾ ಆಯೋಗದ ಸದಸ್ಯನಾಗಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೋವಿಡ್-19 ಸಾಂಕ್ರಾಮಿಕದ ಒಡ್ಡಿದ ಸವಾಲುಗಳ ನಡುವೆಯೂ ತನ್ನ ಮೂಲ ಸೇವೆಗಳನ್ನು ನಡೆಸಿಕೊಂಡು ಬರಲು ಘಟಕಕ್ಕೆ ಸಾಧ್ಯವಾಗುವಂತೆ ಭಾರತ ನೀಡಿರುವ ಆರ್ಥಿಕ ನೆರವಿಗೆ ಘಟಕವು ಮೆಚ್ಚುಗೆ ವ್ಯಕ್ತಪಡಿಸಿದೆ.

ಫೆಲೆಸ್ತೀನ್ ದೇಶಕ್ಕೆ ಭಾರತದ ಪ್ರತಿನಿಧಿ ಸುನೀಲ್ ಕುಮಾರ್ ವಿಶ್ವಸಂಸ್ಥೆಯ ಈ ಘಟಕಕ್ಕೆ ಭಾರತದ ದೇಣಿಗೆಯನ್ನು ನೀಡಿದರು.

ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾಮಗಾರಿ ಘಟಕವು ನೀಡುವ ನೆರವನ್ನು ಸುಮಾರು 31 ಲಕ್ಷ ಫೆಲೆಸ್ತೀನ್ ನಿರಾಶ್ರಿತರು ಅವಲಂಬಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News