ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ನೀಡಿದ ಐರೋಪ್ಯ ಒಕ್ಕೂಟ

Update: 2020-05-19 17:00 GMT

ಬ್ರಸೆಲ್ಸ್ (ಬೆಲ್ಜಿಯಮ್), ಮೇ 19: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯಿಂದ ಹೊರಬರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆನ್ನಿಗೇ, ಐರೋಪ್ಯ ಒಕ್ಕೂಟವು ಮಂಗಳವಾರ ಅದರ ಬೆಂಬಲಕ್ಕೆ ಧಾವಿಸಿದೆ ಹಾಗೂ ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಬಹುಪಕ್ಷೀಯ ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ಅದು ಪ್ರತಿಪಾದಿಸಿದೆ.

ಇದು ಏಕತೆ ಅಗತ್ಯವಾಗಿರುವ ಸಮಯ, ಯಾರ ವಿರುದ್ಧವಾದರೂ ಬೆರಳು ತೋರಿಸುವ ಅಥವಾ ಬಹುಪಕ್ಷೀಯ ಸಹಕಾರವನ್ನು ಕಡೆಗಣಿಸುವ ಕಾಲವಲ್ಲ ಎಂದು ಯುರೋಪಿಯನ್ ವಿದೇಶ ವ್ಯವಹಾರಗಳ ವಕ್ತಾರೆ ವರ್ಜಿನೀ ಬ್ಯಾಟು ಹೆನ್ರಿಕ್ಸನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಅಂತರ್‌ರಾಷ್ಟ್ರೀಯ ಪ್ರತಿಕ್ರಿಯೆ ಹೇಗಿತ್ತು ಎಂಬ ಬಗ್ಗೆ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ವೌಲ್ಯಮಾಪನ ನಡೆಯಬೇಕೆಂದು ಒತ್ತಾಯಿಸುವ ನಿರ್ಣಯವೊಂದನ್ನು ಮಂಗಳವಾರ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅದಿವೇಶನನಲ್ಲಿ ಐರೋಪ್ಯ ಒಕ್ಕೂಟ ಮಂಡಿಸಿದೆ.

ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಡೆಸಿರುವ ಪ್ರಯತ್ನಗಳಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಐರೋಪ್ಯ ಒಕ್ಕೂಟವು ಬೆಂಬಲಿಸುತ್ತದೆ ಹಾಗೂ ಈ ಪ್ರಯತ್ನಗಳನ್ನು ಮುಂದುವರಿಸುವುದಕ್ಕಾಗಿ ಅದಕ್ಕೆ ಈಗಾಗಲೇ ವಿಶೇಷ ಅನುದಾನಗಳನ್ನು ಒದಗಿಸಲಾಗಿದೆ ಎಂದು ವಕ್ತಾರೆ ಹೇಳಿದರು.

30 ದಿನದೊಳಗೆ ಸುಧಾರಿಸಿ; ಇಲ್ಲವೇ ಖಾಯಂ ದೇಣಿಗೆ ಬಂದ್

ಮುಂದಿನ 30 ದಿನಗಳೊಳಗೆ ಸಮರ್ಪಕ ಸುಧಾರಣೆಗಳನ್ನು ಮಾಡಿಕೊಳ್ಳದಿದ್ದರೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುವ ದೇಣಿಗೆಯನ್ನು ಶಾಶ್ವತವಾಗಿ ನಿಲ್ಲಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆದರಿಕೆ ಹಾಕಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಚೀನಾಕ್ಕೆ ಅತ್ಯಂತ ನಿಕಟವಾಗಿದೆ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕವನ್ನು ಚೀನಾ ಕೆಟ್ಟದಾಗಿ ನಿಭಾಯಿಸಿದ್ದರೂ ಅದನ್ನು ಮುಚ್ಚಿಹಾಕಿದೆ ಹಾಗೂ ಚೀನಾವನ್ನು ಸಮರ್ಥಿಸುತ್ತಾ ಬಂದಿದೆ ಎಂಬುದಾಗಿ ಟ್ರಂಪ್ ಆರೋಪಿಸಿದ್ದಾರೆ ಹಾಗೂ ಅದಕ್ಕೆ ನೀಡಬೇಕಾಗಿರುವ ದೇಣಿಗೆಯನ್ನು ಎಪ್ರಿಲ್ ತಿಂಗಳಲ್ಲಿ ನಿಲ್ಲಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್‌ಗೆ ಬರೆದ ಪತ್ರವೊಂದರ ಚಿತ್ರಗಳನ್ನು ಸೋಮವಾರ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಪತ್ರದಲ್ಲಿ ಸಾಂಕ್ರಾಮಿವನ್ನು ನಿಭಾಯಿಸುವಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ವೈಫಲ್ಯಗಳನ್ನು ಟ್ರಂಪ್ ಪಟ್ಟಿ ಮಾಡಿದ್ದಾರೆ. ವೈರಸ್ ಹುಟ್ಟಿಕೊಂಡಿರುವುದಕ್ಕೆ ಸಂಬಂಧಿಸಿದ ಆರಂಭಿಕ ವರದಿಗಳನ್ನು ಸಂಸ್ಥೆಯು ನಿರ್ಲಕ್ಷಿಸಿದೆ ಹಾಗೂ ಅದು ಚೀನಾಕ್ಕೆ ತೀರಾ ಹತ್ತಿರವಾಗಿದೆ ಎಂಬುದಾಗಿ ಪತ್ರದಲ್ಲಿ ಟ್ರಂಪ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News