ಹೆಚ್ಚಿನ ಕೊರೋನ ಸೋಂಕಿತರನ್ನು ಹೊಂದಿರುವುದು ಗೌರವದ ಸಂಕೇತ ಎಂದ ಟ್ರಂಪ್ !

Update: 2020-05-21 15:21 GMT

ವಾಶಿಂಗ್ಟನ್, ಮೇ 21: 15 ಲಕ್ಷ ಕೊರೋನ ವೈರಸ್ ಸೋಂಕಿತರನ್ನು ಹೊಂದುವ ಮೂಲಕ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವುದು ಅಮೆರಿಕಕ್ಕೆ ಗೌರವದ ವಿಷಯವಾಗಿದೆ ಎಂದು ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸೋಂಕಿತರನ್ನು ಪತ್ತೆಹಚ್ಚಲು ಅಮೆರಿಕವು ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದೆ ಎನ್ನುವುದು ಇದರ ಅರ್ಥ ಎಂಬುದಾಗಿ ಅವರು ತನ್ನ ಹೇಳಿಕೆಗೆ ವಿವರಣೆ ನೀಡಿದ್ದಾರೆ.

ಅಮೆರಿಕದಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 15 ಲಕ್ಷವನ್ನು ಮೀರಿದೆ ಹಾಗೂ ಮೃತಪಟ್ಟವರ ಸಂಖ್ಯೆ 91,000ವನ್ನು ದಾಟಿದೆ. ಈ ಎರಡೂ ವಿಭಾಗಗಳಲ್ಲಿ ಅಮೆರಿಕವೇ ಜಗತ್ತಿನ ಮುಂಚೂಣಿಯಲ್ಲಿದೆ.

“ಇದನ್ನು ನಾನು ಧನಾತ್ಮಕವಾಗಿ ನೋಡುತ್ತೇನೆ. ಯಾಕೆಂದರೆ ನಮ್ಮ ಪರೀಕ್ಷೆಗಳು ಇತರರಿಗಿಂತ ತುಂಬಾ ಉತ್ತಮವಾಗಿದೆ ಎನ್ನುವುದು ಇದರ ಅರ್ಥ” ಎಂದು ಬುಧವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಸ್ಫೋಟದ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಹಾಗಾಗಿ, ನಮ್ಮಲ್ಲಿ ತುಂಬಾ ಸೋಂಕು ಪ್ರಕರಣಗಳು ಇರುವುದನ್ನು ಕೆಟ್ಟ ವಿಷಯ ಎಂಬುದಾಗಿ ನಾನು ಭಾವಿಸುವುದಿಲ್ಲ. ನಾನು ಅದನ್ನು ಗೌರವದ ಸಂಕೇತ ಎಂಬುದಾಗಿ ತಿಳಿಯುತ್ತೇನೆ. ಅದು ನಿಜವಾಗಿಯೂ ಗೌರವದ ವಿಷಯವಾಗಿದೆ”  ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News