ಭಾರತದ ವಿರುದ್ಧ ದಿಗ್ಬಂಧನ ಸಾಧ್ಯತೆ ಇನ್ನೂ ಇದೆ: ಅಮೆರಿಕದ ಹಿರಿಯ ರಾಜತಾಂತ್ರಿಕೆ

Update: 2020-05-21 16:00 GMT
ಫೋಟೊ ಕೃಪೆ: @State_SCA

ವಾಶಿಂಗ್ಟನ್, ಮೇ 21: ರಶ್ಯದಿಂದ ಎಸ್-400 ಕ್ಷಿಪಣಿಗಳನ್ನು ಖರೀದಿಸಿರುವುದಕ್ಕಾಗಿ ಭಾರತದ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವ ಸಾಧ್ಯತೆ ಈಗಲೂ ಜೀವಂತವಾಗಿದೆ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಗಳಿಗಾಗಿನ ಅಮೆರಿಕದ ನಿರ್ಗಮನ ಉಪ ಸಹಾಯಕ ವಿದೇಶ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಹೇಳಿದ್ದಾರೆ.

ಐದು ಎಸ್-400 ಕ್ಷಿಪಣಿಗಳನ್ನು ಖರೀದಿಸುವುದಕ್ಕಾಗಿ ಭಾರತವು 2018 ಅಕ್ಟೋಬರ್‌ನಲ್ಲಿ ರಶ್ಯದೊಂದಿಗೆ 5 ಬಿಲಿಯ ಡಾಲರ್ (ಸುಮಾರು 37,760 ಕೋಟಿ ರೂಪಾಯಿ) ಒಪ್ಪಂದಕ್ಕೆ ಸಹಿ ಹಾಕಿತು. ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿದರೆ ಅಮೆರಿಕದ ವಿರೋಧಿಗಳನ್ನು ದಿಗ್ಬಂಧನಗಳ ಮೂಲಕ ಎದುರಿಸುವ ಕಾಯ್ದೆ (ಕಾಟ್ಸ)ಯ ಅನುಸಾರ ದಿಗ್ಬಂಧನಗಳನ್ನು ಎದುರಿಸಬಹುದು ಎಂಬ ಅಮೆರಿಕದ ಎಚ್ಚರಿಕೆಯನ್ನು ಭಾರತ ನಿರ್ಲಕ್ಷಿಸಿತ್ತು.

ಕಾಟ್ಸ ಈಗಲೂ ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಆದ್ಯತೆಯ ನೀತಿಯಾಗಿಯೇ ಉಳಿದಿದೆ. ಈ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಯು ಕಾಂಗ್ರೆಸ್‌ನಲ್ಲಿ ತೀವ್ರವಾಗಿದೆ ಹಾಗೂ ಈ ಸೇನಾ ಒಪ್ಪಂದಗಳಿಂದ ರಶ್ಯ ಗಳಿಸುವ ಹಣ ಹಾಗೂ ಅದನ್ನು ನೆರೆಯ ದೇಶಗಳ ಸಾರ್ವಭೌಮತೆಯನ್ನು ದುರ್ಬಲಗೊಳಿಸಲು ಬಳಸುವ ಸಾಧ್ಯತೆ ಬಗ್ಗೆ ಕಾಂಗ್ರೆಸ್ ಆತಂಕ ಹೊಂದಿದೆ ಎಂದು ಬುಧವಾರ ವಾಶಿಂಗ್ಟನ್ ಡಿಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

ಆ್ಯಲಿಸ್ ವೆಲ್ಸ್ 31 ವರ್ಷಗಳ ರಾಜತಾಂತ್ರಿಕ ವೃತ್ತಿಜೀವನದ ಬಳಿಕ ನಾಳೆ (ಶುಕ್ರವಾರ) ನಿವೃತ್ತರಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News