ಬಾಂಗ್ಲಾ: ಚಂಡಮಾರುತಕ್ಕೆ 12 ಬಲಿ

Update: 2020-05-21 16:17 GMT

ಢಾಕಾ (ಬಾಂಗ್ಲಾದೇಶ), ಮೇ 21: ಬುಧವಾರ ಅಪ್ಪಳಿಸಿದ ಅಂಫಾನ್ ಚಂಡಮಾರುತಕ್ಕೆ ಬಾಂಗ್ಲಾದೇಶದಲ್ಲಿ 12 ಮಂದಿ ಬಲಿಯಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ 26 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ, ಮೃತಪಟ್ಟವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

1999ರಲ್ಲಿ ಬೀಸಿದ ಸೂಪರ್ ಚಂಡಮಾರುತದ ಬಳಿಕ ಬಂಗಾಳ ಕೊಲ್ಲಿಯಿಂದ ಹುಟ್ಟಿ ಬಂದ ಅತಿ ಪ್ರಚಂಡ ಚಂಡಮಾರುತ ಇದಾಗಿದೆ.

ಗಾಳಿಯು ಎಷ್ಟು ಪ್ರಚಂಡವಾಗಿತ್ತೆಂದರೆ ಅದು ಎಲ್ಲವನ್ನೂ ನೆಲಸಮಗೊಳಿಸುತ್ತದೆ ಎಂದನಿಸುತ್ತಿತ್ತು ಎಂದು ಶಫೀಕುಲ್ ಇಸ್ಲಾಮ್ ಹೇಳಿದರು. ಅವರು ಚಂಡಮಾರುತದ ಪ್ರಕೋಪದ ಅವಧಿಯಲ್ಲಿ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಡನೆ ಮಂಚವೊಂದರ ಅಡಿಯಲ್ಲಿ ಗಂಟೆಗಟ್ಟಳೆ ಅವಿತು ಕುಳಿತರು. ಅವರ ಮನೆಯ ತಗಡಿನ ಮೇಲ್ಛಾವಣಿ ಹಾರಿ ಹೋಗಿತ್ತು. ಗಾಳಿಯ ತೀವ್ರತೆಯನ್ನು ಎದುರಿಸಬಹುದು ಎನ್ನುವ ತಪ್ಪು ಲೆಕ್ಕಾಚಾರದಲ್ಲಿ ಅವರು ಆಶ್ರಯ ಕೇಂದ್ರಕ್ಕೆ ಹೋಗದೆ ಮನೆಯಲ್ಲೇ ಉಳಿದಿದ್ದರು.

150 ಕಿ.ಮೀ.ಗೂ ಅಧಿಕ ವೇಗದಿಂದ ಬೀಸಿದ ಗಾಳಿಯು ಎಲ್ಲವನ್ನೂ ನೆಲಸಮಗೊಳಿಸಿತು.

ಗಾಳಿಯು ಎಲ್ಲವನ್ನೂ ನಾಶ ಮಾಡಿದೆ. ಎಲ್ಲವೂ ಹೋಯಿತು. ನಾವು ಕೂಡ ಸಾವಿನ ಸಮೀಪಕ್ಕೆ ಬಂದಿದ್ದೆವು ಎಂದು ಅವರು ಹೇಳಿದರು.

ಬಾಂಗ್ಲಾದೇಶಕ್ಕೆ 1970ರಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಸುಮಾರು 5 ಲಕ್ಷ ಮಂದಿ ಬಲಿಯಾಗಿದ್ದರು. 2007ರಲ್ಲಿ ಬೀಸಿದ ಇನ್ನೊಂದು ಚಂಡಮಾರುತದಲ್ಲಿ 3,500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News