ಹಾಂಕಾಂಗ್‌ಗೆ ನೀಡಲಾಗಿರುವ ವಿಶೇಷ ವ್ಯಾಪಾರ ಸ್ಥಾನಮಾನ ವಾಪಸ್

Update: 2020-05-25 16:54 GMT

ವಾಶಿಂಗ್ಟನ್, ಮೇ 25: ಚೀನಾವು ಹಾಂಕಾಂಗ್‌ನ ಸ್ವಾಯತ್ತೆಗೆ ಧಕ್ಕೆ ತರುವ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ತಂದರೆ, ಹಾಂಕಾಂಗ್‌ಗೆ ನೀಡಲಾಗಿರುವ ವಿಶೇಷ ವ್ಯಾಪಾರ ಸ್ಥಾನಮಾನವನ್ನು ಅಮೆರಿಕ ಹಿಂದಕ್ಕೆ ಪಡೆದುಕೊಳ್ಳಬಹುದಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್ ರವಿವಾರ ಎಚ್ಚರಿಸಿದ್ದಾರೆ.

ಅಮೆರಿಕ ಮತ್ತು ಚೀನಾಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಹಾಗೂ ಉಭಯ ದೇಶಗಳು ಶೀತಲ ಸಮರದ ಹೊಸ್ತಿಲಲ್ಲಿವೆ ಎಂಬುದಾಗಿ ಚೀನಾ ವಿದೇಶ ಸಚಿವ ವಾಂಗ್ ಯಿ ಹೇಳಿದ ಗಂಟೆಗಳ ಬಳಿಕ ಅಮೆರಿಕ ಆಡಳಿತದ ಉನ್ನತ ಅಧಿಕಾರಿಯೊಬ್ಬರ ಈ ಹೇಳಿಕೆ ಹೊರಬಿದ್ದಿದೆ.

ಹಿಂದಿನ ಬ್ರಿಟಿಶ್ ವಸಾಹತು ಆಗಿದ್ದ ಹಾಂಕಾಂಗನ್ನು ಚೀನಾಕ್ಕೆ ಮರಳಿಸುವುದಕ್ಕೆ ಸಂಬಂದಿಸಿ 1984ರಲ್ಲಿ ಬ್ರಿಟನ್ ಮತ್ತು ಚೀನಾಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು. ಹಾಂಕಾಂಗ್‌ಗೆ 2047ರವರೆಗೆ ಗಮನಾರ್ಹ ಸ್ವಾಯತ್ತೆಯನ್ನು ನೀಡಬೇಕು ಎಂಬುದಾಗಿ ಈ ಒಪ್ಪಂದ ಹೇಳುತ್ತದೆ.

ಸಿಬಿಎಸ್ ಚಾನೆಲ್‌ನ ಫೇಸ್ ದ ನೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಒಬ್ರಿಯಾನ್, ಈ ಒಪ್ಪಂದವನ್ನು ಉಲ್ಲೇಖಿಸುತ್ತಾ, ಚೀನಾವು ಒಪ್ಪಂದವನ್ನು ಉಲ್ಲಂಸುವಂತೆ ಕಂಡುಬರುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News