ಅಫ್ಘಾನ್: 2,000 ತಾಲಿಬಾನ್ ಕೈದಿಗಳ ಬಿಡುಗಡೆಗೆ ಚಾಲನೆ

Update: 2020-05-25 17:00 GMT

ಕಾಬೂಲ್ (ಅಫ್ಘಾನಿಸ್ತಾನ), ಮೇ 25: ಈದ್ ರಜಾ ದಿನಗಳ ಅವಧಿಯಲ್ಲಿ ಅಚ್ಚರಿಯ ಯುದ್ಧವಿರಾಮವನ್ನು ತಾಲಿಬಾನ್ ಬಂಡುಕೋರರು ಘೋಷಿಸಿದ ಬೆನ್ನಿಗೇ, ಸದ್ಭಾವನೆಯ ಸಂಕೇತವಾಗಿ 2,000 ತಾಲಿಬಾನ್ ಕೈದಿಗಳನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆಗೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ರವಿವಾರ ಚಾಲನೆ ನೀಡಿದ್ದಾರೆ.

ರವಿವಾರದಿಂದ ಮೂರು ದಿನಗಳ ಕಾಲ ತಾಲಿಬಾನ್ ಘೋಷಿಸಿರುವ ಯುದ್ಧವಿರಾಮವನ್ನು ಸ್ವೀಕರಿಸಿರುವ ಅಧ್ಯಕ್ಷ ಘನಿ, ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಲು ಸರಕಾರ ಸಿದ್ಧವಿದೆ ಎಂಬುದಾಗಿಯೂ ಹೇಳಿದರು.

ಕೈದಿಗಳನ್ನು ಬಿಡುಗಡೆ ಮಾಡಲು ತೆಗೆದುಕೊಂಡಿರುವ ನಿರ್ಧಾರವು ಸದ್ಭಾವನೆಯ ದ್ಯೋತಕವಾಗಿದೆ ಹಾಗೂ ಶಾಂತಿ ಪ್ರಕ್ರಿಯೆಯ ಯಶಸ್ಸಿಗಾಗಿ ಅದನ್ನು ತೆಗೆದುಕೊಳ್ಳಲಾಗಿದೆ ಎಂದು ಘನಿಯ ವಕ್ತಾರ ಸಿದ್ದೀಕ್ ಸಿದ್ದೀಕಿ ಟ್ವಿಟರ್‌ನಲ್ಲಿ ತಿಳಿಸಿದಿರು.

ತಾಲಿಬಾನ್ ಕೈದಿಗಳನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಲಾಗುವುದು ಎಂದು ಇದಕ್ಕೂ ಮುನ್ನ ಅಫ್ಘಾನ್ ಅಧ್ಯಕ್ಷರು ಹೇಳಿದ್ದರು.

ಅಮೆರಿಕ ಮತ್ತು ತಾಲಿಬಾನ್ ನಡುವೆ ಫೆಬ್ರವರಿಯಲ್ಲಿ ಏರ್ಪಟ್ಟಿರುವ ಒಪ್ಪಂದದಂತೆ, ಅಫ್ಘಾನ್ ಸರಕಾರವು 5,000 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಇದಕ್ಕೆ ಪ್ರತಿಯಾಗಿ ತಾಲಿಬಾನ್ 1,000 ಅಫ್ಘಾನ್ ಭದ್ರತಾ ಸಿಬ್ಬಂದಿಯನ್ನು ಬಿಡುಗಡೆಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News