ಸಾಮಾಜಿಕ ಮಾಧ್ಯಮಗಳನ್ನು ದಮನಿಸುವ ಆದೇಶಕ್ಕೆ ಟ್ರಂಪ್ ಸಹಿ

Update: 2020-05-29 18:09 GMT

ವಾಶಿಂಗ್ಟನ್, ಮೇ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನು ಗುರಿಯಾಗಿಸಿ ಸರಕಾರಿ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ. ಟ್ರಂಪ್‌ರ ಎರಡು ಟ್ವೀಟ್‌ಗಳು ವಾಸ್ತವಾಂಶಗಳನ್ನು ಆಧರಿಸಿಲ್ಲ ಎಂಬುದಾಗಿ ಟ್ವಿಟರ್ ಬೆಟ್ಟು ಮಾಡಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಆದೇಶಕ್ಕೆ ಸಹಿ ಹಾಕುವ ಮೊದಲು ಶ್ವೇತಭವನದ ಓವಲ್ ಕಚೇರಿಯಿಂದ ಮಾತನಾಡಿದ ಟ್ರಂಪ್, ವಾಕ್ ಸ್ವಾತಂತ್ರ್ಯವು ಅಮೆರಿಕದ ಇತಿಹಾಸದಲ್ಲೇ ಈಗ ಹೆಚ್ಚಿನ ಅಪಾಯಕ್ಕೆ ಒಳಗಾಗಿದ್ದು, ಅದನ್ನು ರಕ್ಷಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಕೈ ಬೆರಳೆಣಿಕೆಯ ಸಾಮಾಜಿಕ ಮಾಧ್ಯಮಗಳ ಸಣ್ಣ ಗುಂಪೊಂದು ಅಮೆರಿಕದ ಅಲ್ಲ ಸಾರ್ವಜನಿಕ ಮತ್ತು ಖಾಸಗಿ ಸಂವಹನಗಳ ಬೃಹತ್ ಭಾಗವನ್ನು ನಿಯಂತ್ರಿಸುತ್ತಿದೆ ಎಂದು ಅವರು ಹೇಳಿಕೊಂಡರು. ಖಾಸಗಿ ನಾಗರಿಕರು ಮತ್ತು ಬೃಹತ್ ಸಾರ್ವಜನಿಕ ಗುಂಪುಗಳ ನಡುವಿನ ಯವುದೇ ವಿಧದ ಸಂವಹನವನ್ನು ಸೆನ್ಸರ್ ಮಾಡುವ, ನಿರ್ಬಂಧಿಸುವ, ತಿದ್ದುವ, ಆಕಾರ ಕೊಡುವ, ಮರೆಮಾಚುವ, ಬದಲಿಸುವ ಅಪರಿಮಿತ ಅಧಿಕಾರವನ್ನು ಅವರು ಹೊಂದಿದ್ದಾರೆ ಎಂದು ಟ್ರಂಪ್ ಕಿಡಿಗಾರಿದರು.

ಈ ಆದೇಶವು 1996ರ ಕಾನೂನೊಂದರ 230ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದೆ. 230ನೇ ಪರಿಚ್ಛೇದವು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾದ ಸಂದೇಶಗಳಿಗಾಗಿ ಆ ಕಂಪೆನಿಗಳನ್ನು ಕಾನೂನು ಮೊಕದ್ದಮೆಯಿಂದ ರಕ್ಷಿಸುತ್ತದೆ. ಈಗ ಅದಕ್ಕೆ ತಿದ್ದುಪಡಿ ತರಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾದ ಪೋಸ್ಟ್‌ಗಳಿಗಾಗಿ ಆ ಕಂಪೆನಿಗಳನ್ನು ಹೊಣೆಗಾರರನ್ನಾಗಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News