ಧಾರ್ಮಿಕ ತಾರತಮ್ಯವೂ ವರ್ಣಭೇದ ನೀತಿಯ ಭಾಗ: ಇರ್ಫಾನ್ ಪಠಾಣ್

Update: 2020-06-09 16:32 GMT

ಹೊಸದಿಲ್ಲಿ, ಜೂ.9: ವರ್ಣಭೇದ ನೀತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗೆ ಧ್ವನಿಗೂಡಿಸಿರುವ ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್, ‘‘ವರ್ಣಭೇದ ನೀತಿಯು ಕೇವಲ ಚರ್ಮದ ಬಣ್ಣಕ್ಕೆ ಸೀಮಿತವಾಗಿಲ್ಲ. ಅವರ ಧರ್ಮದ ಕಾರಣದಿಂದಾಗಿ ಒಬ್ಬರನ್ನು ಜನಾಂಗೀಯವಾಗಿ ನಿಂದಿಸುವುದೂ ಕೂಡ ವರ್ಣಭೇದ ನೀತಿಯ ಭಾಗ’’ ಎಂದು ಹೇಳಿದ್ದಾರೆ.

ಆಫ್ರಿಕನ್-ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಕಳೆದ ತಿಂಗಳು ಅಮೆರಿಕದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಬಳಿಕ ಅಮೆರಿಕದಾದ್ಯಂತ ಬೃಹತ್ ಪ್ರತಿಭಟನೆ ನಡೆದಿತ್ತು. ವಿಶ್ವದಾದ್ಯಂತ ವರ್ಣಭೇದ ನೀತಿಯ ಕುರಿತು ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.

‘‘ವರ್ಣಭೇದ ನೀತಿಯನ್ನು ವ್ಯಕ್ತಿಯ ಚರ್ಮದ ಬಣ್ಣಕ್ಕೆ ಸೀಮಿತಗೊಳಿಸಲಾಗಿಲ್ಲ. ನಿಮಗೆ ವಿಭಿನ್ನ ನಂಬಿಕೆ ಇರುವ ಕಾರಣಕ್ಕೆ ಸಮಾಜದಲ್ಲಿ ಮನೆಯನ್ನು ಖರೀದಿಸಲು ಅವಕಾಶ ನೀಡದಿರುವುದು ವರ್ಣಭೇದ ನೀತಿಯ ಭಾಗವಾಗಿದೆ’’ ಎಂದು ಪಠಾಣ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇದು ನಿಮ್ಮ ವೈಯಕ್ತಿಕ ಅನುಭವವೇ ಅಥವಾ ನೀವು ಇದನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪಠಾಣ್, ‘‘ಇದನ್ನು ನೋಡಿದ್ದೇನೆ ಹಾಗೂ ಇದನ್ನು ಯಾರು ಕೂಡ ನಿರಾಕರಿಸುವುದಿಲ್ಲ’’ ಎಂದರು.

ಈ ವರ್ಷಾರಂಭದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಪಠಾಣ್ ಭಾರತದ ಪರವಾಗಿ 29 ಟೆಸ್ಟ್, 120 ಏಕದಿನ ಹಾಗೂ 24 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಫ್ಲಾಯ್ಡ್ ಸಾವಿನ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟಿಗರು ಕ್ರೀಡೆಯಲ್ಲಿನ ಜನಾಂಗೀಯ ನಿಂದನೆಯ ಕುರಿತು ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ.

ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ಡರೆನ್ ಸಮ್ಮಿ ಈ ಕುರಿತು ಮಾತನಾಡಿದ್ದಾರೆ. 2014ರ ಐಪಿಎಲ್‌ನಲ್ಲಿ ಹೈದರಾಬಾದ್ ತಂಡದ ಪರ ಆಡುವಾಗ ತಾನು ಕೂಡ ಜನಾಂಗೀಯ ನಿಂದನೆ ಎದುರಿಸಿದ್ದೆ ಎಂದು ಸಮ್ಮಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News