×
Ad

ಇಂಗ್ಲೆಂಡ್‌ಗೆ ತೆರಳಿದ ವೆಸ್ಟ್ಇಂಡೀಸ್ ಕ್ರಿಕೆಟಿಗರು

Update: 2020-06-09 23:13 IST

ಆ್ಯಂಟಿಗುವಾ, ಜೂ. 9: ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿರುವ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಎಲ್ಲ ಆಟಗಾರರ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಕಂಡು ಬಂದಿದ್ದು, ಎಲ್ಲರೂ ಸೋಮವಾರ ಇಂಗ್ಲೆಂಡ್‌ಗೆ ನಿರ್ಗಮಿಸಿದ್ದಾರೆ.

ಹಿಂದಿನ ದಿನ ಎರಡು ವಿಮಾನಗಳು ವೆಸ್ ್ಟ ಇಂಡೀಸ್‌ನ ವಿವಿಧ ದ್ವೀಪಗಳಿಂದ ಆಟಗಾರರನ್ನು ಕಲೆ ಹಾಕಿತ್ತು. ಎಲ್ಲರೂ ಖಾಸಗಿ ಚಾರ್ಟರ್‌ನಲ್ಲಿ ಒಟ್ಟಿಗೆ ಸೇರಿಕೊಂಡರು. ಈ ವಿಮಾನ ಮಂಗಳವಾರ ಬೆಳಗ್ಗೆ ಮ್ಯಾಂಚೆಸ್ಟರ್‌ಗೆ ತಲುಪಿದೆ.

ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ಗೆ ತಲುಪಿದಾಗ ಇಡೀ ತಂಡವನ್ನು ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ ಹಾಗೂ ಮತ್ತೊಮ್ಮೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವಿಂಡೀಸ್ ತಂಡ ಜೈವಿಕ-ಸುರಕ್ಷಿತ ಪರಿಸರದಲ್ಲಿ ಏಳು ವಾರಗಳ ಕಾಲ ಉಳಿಯಲಿದ್ದು, ತರಬೇತಿ ನಡೆಸಿ, ಆಡಲಿದೆ.

ಸ್ಟೇಡಿಯಂನೊಳಗೆ ಹಾಗೂ ಹೊರಗೆ ಓಡಾಡುವುದಕ್ಕೆ ಕೆಲವು ಶಿಷ್ಟಾಚಾರಗಳು ಪಾಲಿಸಲಾಗುತ್ತದೆ. ಮೀಸಲು ಆಟಗಾರರ ಗುಂಪು ತರಬೇತಿಗಾಗಿ ಪ್ರಯಾಣಿಸಲಿದ್ದು, ಟೆಸ್ಟ್ ತಂಡಕ್ಕೆ ತಯಾರಾಗಲು ನೆರವಾಗಲಿದ್ದಾರೆ. ಒಂದು ವೇಳೆ ಗಾಯವಾಗುವ ಆಟಗಾರರ ಬದಲಿಯಾಗಿ ಲಭ್ಯವಿರಲಿದ್ದಾರೆ.

21 ದಿನಗಳ ಕಾಲ ನಡೆಯಲಿರುವ ಟೆಸ್ಟ್ ಸರಣಿಯ ವೇಳೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಟೆಸ್ಟ್ ಸರಣಿಯು ಜುಲೈ 8ರಂದು ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿದೆ. ಓಲ್ಡ್ ಟ್ರಾಫೋರ್ಡ್‌ನಲ್ಲಿ ಜುಲೈ 16ರಿಂದ 20 ಹಾಗೂ ಜುಲೈ 24ರಿಂದ 28ರವರೆಗೆ ಇನ್ನೆರಡು ಪಂದ್ಯಗಳಲ್ಲಿ ಆಡಲಿದೆ.

ಹೊಟೇಲ್‌ಗಳು ಹತ್ತಿರವಿರುವ ಕ್ರೀಡಾಂಗಣ ಗಳನ್ನು ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಮೇ ಹಾಗೂ ಜೂನ್‌ನಲ್ಲಿ ಈ ಸರಣಿಯನ್ನು ನಿಗದಿಪಡಿಸಲಾಗಿತ್ತು. ಕೊರೋನ ವೈರಸ್ ನಿರ್ಬಂಧದಿಂದಾಗಿ ಕ್ರಿಕೆಟ್ ಪ್ರವಾಸವನ್ನು ಮುಂದೂಡಲಾಗಿದೆ.

‘‘ಈ ಸರಣಿಗಾಗಿ ನಾವು ಇಂಗ್ಲೆಂಡ್‌ಗೆ ಪ್ರಯಾಣಿಸುವಾಗ ಇದು ಕ್ರಿಕೆಟ್‌ನಲ್ಲಿ ಹಾಗೂ ಸಾಮಾನ್ಯವಾಗಿ ಕ್ರೀಡೆಗಳಲ್ಲಿ ದೊಡ್ಡ ಹೆಜ್ಜೆಯಾಗಿದೆ. ಪಂದ್ಯದ ಹೊಸ ಹಂತಕ್ಕೆ ಸಾಕಷ್ಟು ಸಮಯ ವ್ಯಯಿಸಲಾಗಿದೆ’’ಎಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News