ಆಸ್ಟ್ರೇಲಿಯ ಪ್ರಜೆಗೆ ಚೀನಾದಲ್ಲಿ ಮರಣದಂಡನೆ: ಪ್ರಧಾನಿ ಸ್ಕಾಟ್ ಮೊರಿಸನ್ ಕಳವಳ

Update: 2020-06-15 16:15 GMT

ಸಿಡ್ನಿ (ಆಸ್ಟ್ರೇಲಿಯ), ಜೂ. 15: ಪ್ರಕರಣವೊಂದಕ್ಕೆ ಸಂಬಂಧಿಸಿ ಆಸ್ಟ್ರೇಲಿಯದ ವ್ಯಕ್ತಿಯೊಬ್ಬನಿಗೆ ಚೀನಾದಲ್ಲಿ ಮರಣದಂಡನೆ ವಿಧಿಸಿರುವುದಕ್ಕೆ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ಈಗಾಗಲೇ ಹದಗೆಟ್ಟಿರುವ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಉದ್ವಿಗ್ನಗೊಳಿಸುವ ಸಾಧ್ಯತೆಗಳಿವೆ.

ಸಿಡ್ನಿಯ ನಟ ಹಾಗೂ ಬಳಿಕ ಹೂಡಿಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮ್ ಗಿಲೆಸ್ಪಿಗೆ ಮಾದಕದ್ರವ್ಯ ಕಳ್ಳಸಾಗಣೆ ಆರೋಪದಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂಬುದಾಗಿ ಚೀನಾದ ನ್ಯಾಯಾಲಯವೊಂದು ಶನಿವಾರ ಘೋಷಿಸಿದೆ. ಅವರನ್ನು ಏಳು ವರ್ಷಗಳ ಕಾಲ ರಹಸ್ಯವಾಗಿ ಬಂಧನದಲ್ಲಿಡಲಾಗಿತ್ತು.

ಈಗಾಗಲೇ ಹದಗೆಡುತ್ತಿರುವ ಆಸ್ಟ್ರೇಲಿಯ ಮತ್ತು ಚೀನಾಗಳ ನಡುವಿನ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಈ ಪ್ರಕರಣವು ಇನ್ನಷ್ಟು ಕದಡಬಹುದು ಎನ್ನಲಾಗಿದೆ. ಚೀನಾವು ಆಸ್ಟ್ರೇಲಿಯದ ಅತಿ ದೊಡ್ಡ ವ್ಯಾಪಾರ ಭಾಗೀದಾರ ದೇಶವಾಗಿದೆ.

ಗಿಲೆಸ್ಪಿಯ ಬಂಧನದ ಬಗ್ಗೆ ಪ್ರಧಾನಿ ಸ್ಕಾಟ್ ಮೊರಿಸನ್ ಮತ್ತು ಆಸ್ಟ್ರೇಲಿಯದ ಇತರ ಅಧಿಕಾರಿಗಳಿಗೆ ತಿಳಿದಿತ್ತು. ಈ ವಿಷಯದಲ್ಲಿ ಅವರು ಚೀನಾದ ಅಧಿಕಾರಿಗಳೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದರು.

‘‘ಆಸ್ಟ್ರೇಲಿಯದ ಪ್ರಜೆ ಕಾರ್ಮ್ ಗಿಲೆಸ್ಪಿಗೆ ಚೀನಾದಲ್ಲಿ ಮರಣ ದಂಡನೆ ನೀಡಿರುವುದನ್ನು ತಿಳಿದು ನನಗೆ ಮತ್ತು ಸರಕಾರಕ್ಕೆ ತುಂಬಾ ಬೇಸರ ಹಾಗೂ ಕಳವಳವಾಗಿದೆ’’ ಎಂದು ಸ್ಕಾಟ್ ಮೊರಿಸನ್ ಹೇಳಿದ್ದಾರೆ.

2013ರಲ್ಲಿ ವಾಯುವ್ಯ ಹಾಂಕಾಂಗ್‌ನ ಬೈಯೂನ್ ವಿಮಾನ ನಿಲ್ದಾಣದಲ್ಲಿ ಗಿಲೆಸ್ಪಿಯ ಚೀಲದಲ್ಲಿ 7.5 ಕೆಜಿಗೂ ಅಧಿಕ ಮೆಥಾಮ್‌ಫೆಟಮೈನ್ ಪತ್ತೆಯಾದ ಬಳಿಕ ಅವರನ್ನು ಬಂಧಿಸಲಾಗಿತ್ತು ಎಂದು ಚೀನಾದ ಸರಕಾರಿ ಮಾಧ್ಯಮಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News