×
Ad

ಜನಾಂಗೀಯ ತಾರತಮ್ಯದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಬುಧವಾರ ತುರ್ತು ಸಂವಾದ

Update: 2020-06-15 22:31 IST

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜೂ. 15: ಜನಾಂಗೀಯ ತಾರತಮ್ಯ ಮತ್ತು ಪೊಲೀಸ್ ಕ್ರೌರ್ಯದ ಬಗ್ಗೆ ತುರ್ತಾಗಿ ಸಂವಾದವೊಂದನ್ನು ಏರ್ಪಡಿಸುವಂತೆ ಆಫ್ರಿಕದ ದೇಶಗಳು ಮಾಡಿರುವ ಮನವಿಯನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಸೋಮವಾರ ಅಂಗೀಕರಿಸಿದೆ.

ಅಮೆರಿಕದ ಮಿನಪೊಲಿಸ್ ನಗರದಲ್ಲಿ ಕಳೆದ ತಿಂಗಳು ಪೊಲೀಸರ ಕೈಯಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾ ಮೃತಪಟ್ಟ ಬಳಿಕ ಅಮೆರಿಕ ಹಾಗೂ ಜಗತ್ತಿನಾದ್ಯಂತ ನಡೆದ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಅರ್ಧದಲ್ಲೇ ಮುಕ್ತಾಯಗೊಂಡಿದ್ದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ 43ನೇ ಅಧಿವೇಶನ ಪುನರಾರಂಭಗೊಳ್ಳುತ್ತಿದ್ದಂತೆಯೇ, ಜನಾಂಗೀಯ ತಾರತಮ್ಯ ಕುರಿತ ಚರ್ಚೆಯನ್ನು ಬುಧವಾರ ನಡೆಸುವ ಪ್ರಸ್ತಾವವನ್ನು ಮಂಡಳಿಯ ಅಧ್ಯಕ್ಷೆ ಎಲಿಝಬೆತ್ ಟಿಚಿ ಫಿಸಲ್‌ಬರ್ಗರ್ ಮುಂದಿಟ್ಟರು.

‘‘ಇದಕ್ಕೆ ಯಾವುದೇ ಆಕ್ಷೇಪವನ್ನು ನಾನು ನಿರೀಕ್ಷಿಸುವುದಿಲ್ಲ. ಹಾಗಾಗಿ, ಸಂವಾದವು ಪ್ರಸ್ತಾಪಿಸಿದಂತೆ ನಡೆಯುತ್ತದೆ’’ ಎಂದು ಅವರು ನುಡಿದರು.

‘ತುರ್ತು ಸಂವಾದ’ವೊಂದನ್ನು ನಡೆಸಲು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯು ನಿರ್ಧರಿಸಿರುವುದು ಅದರ 14 ವರ್ಷಗಳ ಇತಿಹಾಸದಲ್ಲಿ ಇದು ಐದನೇ ಬಾರಿಯಾಗಿದೆ. ಮಂಡಳಿಯ ನಿಗದಿತ ಅಧಿವೇಶನದ ನಡುವೆಯೇ ಈ ವಿಶೇಷ ಸಂವಾದಕ್ಕೆ ಅನುಮೋದನೆ ನೀಡಲಾಗಿದೆ.

ಜನಾಂಗೀಯ ತಾರತಮ್ಯ ಪ್ರೇರಿತ ಮಾನವಹಕ್ಕು ಉಲ್ಲಂಘನೆಗಳು, ಆಫ್ರಿಕ ಮೂಲದ ಜನರ ಮೇಲೆ ನಡೆಯುವ ಪೊಲೀಸ್ ದೌರ್ಜನ್ಯಗಳು ಹಾಗೂ ಈ ಅನ್ಯಾಯಗಳು ನಿಲ್ಲಬೇಕು ಎಂದು ಕರೆ ನೀಡುವ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸುವ ಜನರ ಮೇಲೆ ಹಿಂಸಾಚಾರಗಳ ಬಗ್ಗೆ ತುರ್ತು ಸಂವಾದ ನಡೆಯಬೇಕೆಂದು ಕರೆ ನೀಡುವ ಪತ್ರವೊಂದನ್ನು ಆಫ್ರಿಕದ 54 ದೇಶಗಳ ಪರವಾಗಿ ವಿಶ್ವಸಂಸ್ಥೆಗೆ ಬುರ್ಕಿನ ಫಾಸೊ ದೇಶದ ರಾಯಭಾರಿ ಶುಕ್ರವಾರ ಟಿಚಿ ಫಿಸಲ್‌ಬರ್ಗರ್‌ಗೆ ಕಳುಹಿಸಿದ್ದರು.

ಅಸಮಾನತೆ ಪರಿಶೀಲಿಸಲು ಆಯೋಗದ ರಚನೆ: ಬ್ರಿಟನ್ ಪ್ರಧಾನಿ

ಎಲ್ಲ ವಿಧಗಳ ಅಸಮಾನತೆಯ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಆಯೋಗವೊಂದನ್ನು ರಚಿಸುವುದಾಗಿ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ. ಬ್ರಿಟನ್‌ನಾದ್ಯಂತ ಜನಾಂಗೀಯ ನಿಂದನೆ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

‘‘ಅಗಾಧ ಪ್ರಗತಿಯ ಹೊರತಾಗಿಯೂ ಜನಾಂಗೀಯ ತಾರತಮ್ಯವನ್ನು ನಿಭಾಯಿಸಲು ನಾವು ಇನ್ನೂ ತುಂಬಾ ಹೆಚ್ಚಿನದನ್ನು ಮಾಡಬೇಕಾಗಿದೆ’’ ಎಂಬುದಾಗಿ ‘ಟೆಲಿಗ್ರಾಫ್’ ಪತ್ರಿಕೆಯಲ್ಲಿ ಸೋಮವಾರ ಬರೆದ ಲೇಖನದಲ್ಲಿ ಅವರು ಹೇಳಿದ್ದಾರೆ. ಸಮಸ್ಯೆಯನ್ನು ಮೂಲದಿಂದ ಪರಿಹರಿಸಬೇಕಾಗಿದೆಯೇ ಹೊರತು, ಸಮಸ್ಯೆಯ ಲಕ್ಷಣಗಳನ್ನಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಕರಿಯ ವ್ಯಕ್ತಿಯು ಬಿಳಿಯ ಪೊಲೀಸರ ಬಂಧನದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಬ್ರಿಟನ್‌ನಲ್ಲೂ ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನೆಗಳು ನಡೆದಿವೆ. ಅದೇ ವೇಳೆ, ಶನಿವಾರ ಮತ್ತು ರವಿವಾರ ಅಲ್ಲಿ ಕಡು ಬಲಪಂಥೀಯರು ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನೆಗಳ ವಿರುದ್ಧವೇ ಪ್ರತಿಭಟನೆಗಳನ್ನು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News