ಬಾಂಗ್ಲಾದ ಮಾಜಿ ನಾಯಕ ಮೊರ್ತಝಾಗೆ ಕೋವಿಡ್-19 ಸೋಂಕು
ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಐಕಾನ್ ಹಾಗೂ ಮಾಜಿ ನಾಯಕ ಮಶ್ರಾಫೆ ಮೊರ್ತಝಾಗೆ ಕೊರೋನ ವೈರಸ್(ಕೋವಿಡ್-19)ಸೋಂಕು ಇರುವುದು ದೃಢಪಟ್ಟಿದೆ.
ಈ ಕುರಿತು ಕ್ರಿಕೆಟಿಗ ಮೊರ್ತಝಾ ಯಾವುದೇ ಹೇಳಿಕೆ ನೀಡಿಲ್ಲ. ಅವರ ಕುಟುಂಬ ಮೂಲಗಳು ಶನಿವಾರ ಮೊರ್ತಝಾ ಅವರ ಕೋವಿಡ್-19 ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿತ್ತು ಎಂದು ದೃಢಪಡಿಸಿವೆ. ಮೊರ್ತಝಾ ಢಾಕಾದಲ್ಲಿರುವ ತನ್ನ ಮನೆಯಲ್ಲಿ ಸ್ವಯಂ-ಪ್ರತ್ಯೇಕವಾಸದಲ್ಲಿದ್ದಾರೆ.
ಮೊರ್ತಝಾರ ಕಿರಿಯ ಸಹೋದರ ಮೊರ್ಸಾಲಿನ್ ಬಿನ್ ಮೊರ್ತಝಾ ಎಲ್ಲ ಬೆಳವಣಿಗೆಯನ್ನು ದೃಢ ಪಡಿಸಿದ್ದಾರೆ.
‘‘ಸಹೋದರನಿಗೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಅವರು ಪರೀಕ್ಷೆಗೆ ಒಳಗಾಗಿದ್ದರು. ಫಲಿತಾಂಶ ಪಾಸಿಟಿವ್ ಆಗಿದೆ. ಇದೀಗ ಅವರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ’’ಎಂದು ಮೊರ್ಸಾಲಿನ್ ಹೇಳಿದ್ದಾರೆ.
ಮೊರ್ತಝಾ ಅವರ ಕುಟುಂಬ ಸದಸ್ಯರುಗಳಿಗೆ ಈ ಮೊದಲು ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು ಎಂದು ವರದಿಯಾಗಿದೆ. ಇದೇ ವೇಳೆ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಹಿರಿಯ ಸಹೋದರ ನಫೀಸ್ ಇಕ್ಬಾಲ್‌ಗೆ ಕೂಡ ಕೊರೋನ ವೈರಸ್ ಸೋಂಕು ಇರುವುದು ಖಚಿತವಾಗಿದೆ. ನಫೀಸ್ ಪ್ರಸ್ತುತ ಚಿತ್ತಗಾಂಗ್‌ನಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.
ಕಳೆದ ವಾರ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿತ್ತು.