×
Ad

ತಂಡ ಸೇರಲು ಮಲಿಕ್‌ಗೆ ವಿಶೇಷ ರಿಯಾಯಿತಿ

Update: 2020-06-21 11:17 IST

ಮುಂಬೈ: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಆಲ್‌ರೌಂಡರ್ ಶುಐಬ್ ಮಲಿಕ್‌ಗೆ ತಂಡ ಸೇರ್ಪಡೆಯ ವಿಚಾರದಲ್ಲಿ ವಿಶೇಷ ರಿಯಾಯಿತಿ ನೀಡಿದೆ. ಸುಮಾರು 5 ತಿಂಗಳುಗಳಿಂದ ಪತ್ನಿ ಹಾಗೂ ಮಗನಿಂದ ದೂರ ಉಳಿದಿದ್ದ ಮಲಿಕ್‌ಗೆ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಅನುವು ಮಾಡಿಕೊಡಲಾಗಿದ್ದು, ಜುಲೈ 24ರಂದು ಇಂಗ್ಲೆಂಡ್‌ನಲ್ಲಿ ಪಾಕ್ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲು ಅವಕಾಶ ನೀಡಲಾಗಿದೆ.

 ಜಾಗತಿಕ ಮಟ್ಟದಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಾವಳಿ ಹೆಚ್ಚಾಗಿರುವ ಕಾರಣ ಅಂತರ್‌ರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿದ ಬಳಿಕ ಮಲಿಕ್ ಅವರ ಪತ್ನಿ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಒಂದು ವರ್ಷದ ಪುತ್ರ ಹೈದರಾಬಾದ್‌ನಲ್ಲಿದ್ದರೆ, ಮಲಿಕ್ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿದ್ದಾರೆ.

‘‘ಕೋವಿಡ್-19ರಿಂದಾಗಿ ಅಂತರ್‌ರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹೇರಿರುವುದು ಹಾಗೂ ಕೆಲವು ಬದ್ಧತೆಯ ಕಾರಣಕ್ಕೆ ಶುಐಬ್ ಮಲಿಕ್ ಸುಮಾರು ಐದು ತಿಂಗಳುಗಳಿಂದ ತನ್ನ ಕುಟುಂಬದಿಂದ ದೂರ ಉಳಿದಿದ್ದಾರೆ. ಇದೀಗ ಪ್ರಯಾಣದ ಮೇಲಿನ ನಿರ್ಬಂಧ ನಿಧಾನವಾಗಿ ಸಡಿಲಿಸಲಾಗುತ್ತಿದೆ. ಕುಟುಂಬ ಸದಸ್ಯರು ಮತ್ತೆ ಒಂದಾಗುವ ಅವಕಾಶ ಲಭಿಸುತ್ತಿದೆ. ನಮ್ಮ ಕಾಳಜಿಯ ಕರ್ತವ್ಯದ ಭಾಗವಾಗಿ ಮಾನವೀಯ ನೆಲೆಯಲ್ಲಿ ಸಹಾನುಭೂತಿ ತೋರಿಸುವುದು ಸೂಕ್ತವಾಗಿದೆ. ಹೀಗಾಗಿ ನಾವು ಮಲಿಕ್ ಅವರ ಮನವಿಯನ್ನು ಗೌರವಿಸುತ್ತೇವೆ’’ಎಂದು ಪಿಸಿಬಿ ಮುಖ್ಯ ಕಾರ್ಯ ನಿರ್ವಾಹಕ ವಸೀಂ ಖಾನ್ ಹೇಳಿದ್ದಾರೆ.

‘‘ನಾವು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಿದ್ದು, ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಶುಐಬ್ ಮಲಿಕ್ ಜುಲೈ 24ರಂದು ಇಂಗ್ಲೆಂಡ್ ಪ್ರವೇಶಿಸಲು ನೆರವಾಗುವ ಮೂಲಕ ರಿಯಾಯತಿ ನೀಡಿದ್ದಾರೆ. ಶುಐಬ್ ಪಾಕ್ ತಂಡವನ್ನು ಸೇರಿಕೊಳ್ಳುವ ಮೊದಲು ದೇಶವನ್ನು ಪ್ರವೇಶಿಸುವ ಪ್ರವಾಸಿಗರಿಗೆ ಇಂಗ್ಲೆಂಡ್ ಸರಕಾರ ರೂಪಿಸಿರುವ ನೀತಿಗಳನ್ನು ಮಲಿಕ್ ಪಾಲಿಸಲಿದ್ದಾರೆ’’ಎಂದು ವಸೀಂ ಖಾನ್ ಹೇಳಿದ್ದಾರೆ.

ಪಾಕ್ ತಂಡ ಜೂನ್ 28 ರಂದು ಮ್ಯಾಂಚೆಸ್ಟರ್‌ಗೆ ಪ್ರಯಾಣ ಬೆಳೆಸಲಿದ್ದು, ಡರ್ಬಿಶೈರ್‌ನಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಲಿದೆ. ಈ ವೇಳೆ ಆಟಗಾರರಿಗೆ ತರಬೇತಿ ಹಾಗೂ ಅಭ್ಯಾಸವನ್ನು ನಡೆಸಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News